Connect with us

    DAKSHINA KANNADA

    ಪದ್ಮವಿಭೂಷಣ , ಇಸ್ರೋ ಮಾಜಿ ಮುಖ್ಯಸ್ಥ ಪ್ರೊ.U.R.ರಾವ್ ಅಸ್ತಂಗತ

    ಉಡುಪಿ,ಜುಲೈ. 24: ಪದ್ಮವಿಭೂಷಣ, ಖ್ಯಾತ ಬಾಹ್ಯಾಕಾಶ ವಿಜ್ಞಾನಿ, ಇಸ್ರೋದ ಮಾಜಿ ಮುಖ್ಯಸ್ಥ ಪ್ರೊ. ಯು.ಆರ್.ರಾವ್ (85) ಇಂದು ಮುಂಜಾನೆ ಅಸ್ತಂಗತರಾಗಿದ್ದಾರೆ.ಉಡುಪಿ ರಾಮಚಂದ್ರ ರಾವ್ ಅವರು ಬಾಹ್ಯಾಕಾಶ ವಿಜ್ಞಾನಿಗಳಾಗಿ ಭಾರತೀಯ ಬಾಹ್ಯಾಕಾಶ ಸಂಸ್ಥೆಯ ಅಧ್ಯಕ್ಷರಾಗಿ ಭಾರತ ಇಂದು ಬಾಹ್ಯಾಕಾಶ ಯುಗದಲ್ಲಿ ಗಳಿಸಿರುವ ಪ್ರತಿಷ್ಠಿತ ಸ್ಥಾನಕ್ಕೆ ಪ್ರಮುಖ ಕೊಡುಗೆದಾರರು.ಅಂತಾರಾಷ್ಟ್ರೀಯ ಖ್ಯಾತಿಯ ಬಾಹ್ಯಾಕಾಶ ವಿಜ್ಞಾನಿಯಾಗಿರುವ ರಾವ್‌ ಅವರು ಭಾರತದ ಮೊದಲ ಉಪಗ್ರಹ ‘ಆರ್ಯಭಟ’ದ ರೂವಾರಿ. ಆ ಬಳಿಕ ಭಾಸ್ಕರ, ಆ್ಯಪಲ್‌, ರೋಹಿಣಿ, ಇನ್ಸಾಟ್‌–1, ಇನ್ಸಾಟ್‌–2, ಐಆರ್‌ಎಸ್‌–1 ಎ, ಐಆರ್‌ಎಸ್‌–1ಬಿ ಸೇರಿದಂತೆ ಒಟ್ಟು 18 ಉಪಗ್ರಹಗಳ ನಿರ್ಮಾಣದಲ್ಲಿ ಮುಖ್ಯ ಮಾರ್ಗದರ್ಶಕರು. 2004ರ ವರ್ಷದಲ್ಲಿ ಅಂತರರಾಷ್ಟ್ರೀಯ ಪ್ರತಿಷ್ಠಿತ ‘ಸ್ಪೇಸ್ ಮಾಗಜೈನ್’ ಬಾಹ್ಯಾಕಾಶ ವಿಜ್ಞಾನದಲ್ಲಿ 1989-2004 ವರ್ಷದ ವರೆಗಿನ ಅವಧಿಯ ಸಾಧನೆಯ ಆಧಾರದ ಮೇಲೆ ಬಾಹ್ಯಾಕಾಶ ವಿಜ್ಞಾನ ಸಾಧನೆಯ ಹತ್ತು ಪ್ರಮುಖ ಸಾಧಕರಲ್ಲಿ ಯು. ಆರ್. ರಾವ್ ಅವರನ್ನು ಒಬ್ಬ ಪ್ರಮುಖರೆಂದು ಪರಿಗಣಿಸಿತು. ಇದು ನಮ್ಮ ದೇಶ ಮತ್ತು ಇವರನ್ನು ಪಡೆದ ನಮ್ಮ ಕನ್ನಡ ನಾಡಿಗೆ ಹೆಮ್ಮೆಯ ಪ್ರತೀಕವಾಗಿದೆ. ಉಡುಪಿ ಸಮೀಪದ ‘ಮಾರ್ಪಳ್ಳಿ’ಯಲ್ಲಿ ರಾವ್ ಮಾರ್ಚ್ 10, 1932 ರಂದು ಜನಿಸಿದರು. ಇವರ ತಾಯಿ, ಕೃಷ್ಣವೇಣೀಯಮ್ಮ; ತಂದೆ, ಲಕ್ಷ್ಮೀನಾರಾಯಣರಾವ್. ಇವರದು ಕೃಷಿಕ ಕುಟುಂಬ. ರಾಮಚಂದ್ರರಾಯರು ಉಡುಪಿ, ಅನಂತಪುರ, ಮದ್ರಾಸ, ಬನಾರಸ್ ಮೊದಲಾದ ಸ್ಥಳಗಳಲ್ಲಿ ಅಧ್ಯಯನ ಮಾಡಿದರು. ವಿಕ್ರಮ್ ಸಾರಾಭಾಯಿಯವರ ಮಾರ್ಗದರ್ಶನದಲ್ಲಿ ವಿಶ್ವಕಿರಣಗಳ ಬಗೆಗೆ ಅಧ್ಯಯನ ಮಾಡಿ ಗುಜರಾತ್ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪಡೆದರು. ಬಳಿಕ ಅಮೆರಿಕದ ಮೆಸಾಚುಸೆಟ್ಸ್ನಲ್ಲಿ ಉನ್ನತ ವ್ಯಾಸಂಗ ಮಾಡಿದರು. ಟೆಕ್ಸಾಸ ವಿಶ್ವವಿದ್ಯಾಲಯದಲ್ಲಿ ಸಂಶೋಧಕರಾಗಿ, ಉಪನ್ಯಾಸಕರಾಗಿ ದುಡಿದು,1966ರಲ್ಲಿ ಭಾರತಕ್ಕೆ ಮರಳಿದ್ದರು.
    ಮದ್ರಾಸು ವಿಶ್ವವಿದ್ಯಾಲಯದ ವಿಜ್ಞಾನ ಪದವಿ, ಬನಾರಸ್ ಹಿಂದೂ ವಿಶ್ವವಿದ್ಯಾಲಯದ ಸ್ನಾತಕೋತ್ತರ ಪದವಿ ಮತ್ತು ಗುಜರಾತ್ ವಿಶ್ವವಿದ್ಯಾಲಯದಲ್ಲಿ ಪಡೆದ ಡಾಕ್ಟರೇಟ್ ಪದವಿಗಳು ಅವರ ವಿದ್ಯಾಭ್ಯಾಸದ ಮೈಲುಗಲ್ಲುಗಳು. ದೇಶದ ಪ್ರತಿಷ್ಠಿತ ಸಂಸ್ಥೆ ಎಂ.ಐ.ಟಿ ಯಲ್ಲಿ ಅಧ್ಯಾಪನ ನಡೆಸಿದ ರಾವ್ ಅವರು ಟೆಕ್ಸಾಸ್ ವಿಶ್ವವಿದ್ಯಾಲಯದಲ್ಲಿ ಸಹಾಯಕ ವಿದ್ವಾಂಸರಾಗಿ ಎಲ್ಲಾ ಪ್ರಮುಖ ಬಾಹ್ಯಾಕಾಶ ನೌಕೆಗಳ ಸ್ವರೂಪ ಮತ್ತು ಗುಣಲಕ್ಷಣಗಳ ಬಗೆಗೆ ಸಮಗ್ರ ಅಧ್ಯಯನ ನಡೆಸಿದರು. 1966ರಲ್ಲಿ ಭಾರತಕ್ಕೆ ಹಿಂದಿರುಗಿದ ಪ್ರೊ.ರಾವ್ ಅಹಮದಾಬಾದಿನ ಭೌಗೋಳಿಕ ಸಂಶೋಧನಾ ಪ್ರಯೋಗಾಲಯದಲ್ಲಿ ಪ್ರೊಫೆಸರ್ ಆಗಿ ಅಧಿಕಾರವಹಿಸಿಕೊಂಡರು. ಎಂಭತ್ತೆರಡರ ಹಿರಿಯ ವಯಸ್ಸಿನಲ್ಲೂ ಪ್ರೊಫೆಸರ್ ರಾವ್ ಅವರು ಈ ಸಂಸ್ಥೆಯ ಚೇರ್ಮನ್ನರಾಗಿರುವ ವಿಶಿಷ್ಠ ಗೌರವ ಹೊಂದಿದ್ದಾರೆ.
    ಭಾರತದ ಶ್ರೇಷ್ಠ ವಿಜ್ಞಾನಿಗಳಾದ ಡಾ. ವಿಕ್ರಂ ಸಾರಾಬಾಯಿ ಅವರ ಮಾರ್ಗದರ್ಶನದಲ್ಲಿ ಕಾಸ್ಮಿಕ್ ರೇ ಅಸಿಸ್ಟೆಂಟ್ ಎಂಬ ಹುದ್ದೆಯಲ್ಲಿ ತಮ್ಮ ಕಾರ್ಯಕ್ಷೇತ್ರವನ್ನು ಪ್ರಾರಂಭಿಸಿದ ರಾವ್ ಅವರು, ಮುಂದೆ ಎಂ.ಐ.ಟಿ ಯಲ್ಲಿ ಆ ಕಾರ್ಯವನ್ನು ಮುಂದುವರೆಸಿದರು. ಜೆ.ಪಿ.ಎಲ್ ಸಮೂಹದ ಸಹಯೋಗದಲ್ಲಿ ಸೌರಗಾಳಿಯ ಅಲೆಗಳ ಮೂಲಗುಣ ಮತ್ತು ಖಗೋಳದಲ್ಲಿನ ಅಯಸ್ಕಾಂತೀಯ ಶಕ್ತಿಯ ಮೇಲೆ ಅವುಗಳ ಹೊಂದಿರುವ ಪ್ರಭಾವವನ್ನು ಗುರುತಿಸಿದವರಲ್ಲಿ ರಾವ್ ಅವರು ಪ್ರಪ್ರಥಮರು. ಅವರು ಬಾಹ್ಯಾಕಾಶ ನೌಕೆಗಳ ಸಂಬಂಧವಾಗಿ ನಡೆಸಿದ ಪ್ರಯೋಗಗಳ ದೆಸೆಯಿಂದಾಗಿ ಸೌರ ವಿಕಿರಣಗಳ ತತ್ವ ಮತ್ತು ಸೌರವ್ಯೂಹದ ಗ್ರಹಗಳ ನಡುವಿನ ಅಯಸ್ಕಾಂತೀಯ ಗುಣತತ್ವಗಳ ಸಮಗ್ರ ಅರ್ಥೈಸುವಿಕೆ ಸಾಧ್ಯವಾಯಿತು. ದೇಶದ ಸಮಗ್ರ ಅಭಿವೃದ್ಧಿಗೆ ಬಾಹ್ಯಾಕಾಶ ವಿಜ್ಞಾನದ ಬಳಕೆ ಖಂಡಿತ ಸಾಧ್ಯ ಎಂಬುದರ ಬಗ್ಗೆ ದೃಢವಿಶ್ವಾಸ ಹೊಂದಿದ ಯು.ಆರ್. ರಾವ್ ಅವರು 1972ರ ವರ್ಷದಲ್ಲಿ ಉಪಗ್ರಹ ನಿರ್ಮಾಣದ ಜವಾಬ್ಧಾರಿಯನ್ನು ಹೊತ್ತುಕೊಂಡರು. ಅವರ ಮಾರ್ಗದರ್ಶನದ ದೆಸೆಯಿಂದಾಗಿ ಭಾರತದ ಪ್ರಪ್ರಥಮ ಉಪಗ್ರಹ ‘ಆರ್ಯಭಟ’ 1975ರಲ್ಲಿ ನಿರ್ಮಾಣವಾಯಿತು. ಆ ನಂತರದಲ್ಲಿ ಭಾಸ್ಕರ, ಆಪಲ್, ರೋಹಿಣಿ, ಇನ್ಸಾಟ್ 1 ಮತ್ತು ಇನ್ಸಾಟ್ 2 ಸರಣಿಯ ವಿವಿದೋದ್ಧೇಶ ಉಪಗ್ರಹಗಳು ಮತ್ತು ಐ.ಆರ್.ಎಸ್ 1 ಎ ಮತ್ತು ಐ.ಆರ್.ಎಸ್ 1 ಬಿ ಅಂಥಹ ಸುಸಜ್ಜಿತ ಸೂಕ್ಷ್ಮಗ್ರಾಹಿ ಉಪಗ್ರಹಗಳು ಸೇರಿದಂತೆ ಹದಿನೆಂಟಕ್ಕೂ ಹೆಚ್ಚು ಪ್ರಮುಖ ಉಪಗ್ರಹಗಳು ರಾವ್ ಅವರ ನಿರ್ದೇಶನದಲ್ಲಿ ನಿರ್ಮಾಣಗೊಂಡವು.

    1985ರಲ್ಲಿ ಭಾರತೀಯ ಸ್ಪೇಸ್ ಕಮಿಷನ್ನಿನ ಅಧ್ಯಕ್ಷರಾಗಿ ನೇಮಕಗೊಂಡ ಪ್ರೊ. ರಾವ್ ಅವರು ರಾಕೆಟ್ ತಂತ್ರಜ್ಞಾನ ಬಳಕೆಗೆ ವಿಶೇಷ ಆದ್ಯತೆ ನೀಡಿ 1992ರಲ್ಲಿ ಎ ಎಸ್ ಎಲ್ ವಿ ರಾಕೆಟ್ ಉಡಾವಣೆಯ ಪ್ರಮುಖ ಪಾತ್ರಧಾರಿಗಳಾದರು. ಇದಲ್ಲದೆ 1995ರಲ್ಲಿ ಬಾಹ್ಯಾಕಾಶಕ್ಕೆ ಪಿ ಎಸ್ ಎಲ್ ವಿ ಉಡಾವಣೆ ನೌಕೆಯನ್ನೂ ಸಿದ್ಧಪಡಿಸಿ ಆ ಮೂಲಕ 850 ಕೆ.ಜಿ. ತೂಕದ ಉಪಗ್ರಹವನ್ನು ಪೋಲಾರ್ ಪಥದಲ್ಲಿ ಇರಿಸಿಬಂದ ಸಾಮರ್ಥ್ಯಪೂರ್ಣ ಯೋಜನೆಯ ರೂವಾರಿಯಾದರು. ಅವರ ನಿರ್ದೇಶನದಲ್ಲಿ ಮೂಡಿಬಂದ ಇನ್ಸಾಟ್ ಉಪಗ್ರಹಗಳ ದೆಸೆಯಿಂದಾಗಿ ಇಂದು ಭಾರತದ ಮೂಲೆ ಮೂಲೆಯ ಪ್ರಾಂತ್ಯಗಳೂ ಸಹಾ ದೂರಸಂಪರ್ಕ ಸೌಲಭ್ಯ ಹೊಂದುವಂತಾಗಿವೆ. ಪ್ರೊ. ರಾವ್ ಅವರು ಬಾಹ್ಯಾಕಾಶ ತಂತ್ರಜ್ಞಾನದ ಉಪಯೋಗ, ದೇಶದ ಜನತೆಯ ದಿನನಿತ್ಯದ ಉಪಯುಕ್ತತೆಗೆ ದೊರಕಬೇಕೆಂದು ಹಗಲಿರುಳೂ ಶ್ರಮಿಸಿದರು. ಇನ್ಸಾಟ್ ಉಪಗ್ರಹ ಭಾರತೀಯ ಸಂಪರ್ಕಯುಗದಲ್ಲಿ ಸಮಗ್ರ ಕ್ರಾಂತಿಯನ್ನೇ ತಂದವು. ದೂರದರ್ಶನ, ಅಭಿವೃದ್ಧಿಪೂರ್ವಕ ಶಿಕ್ಷಣ, ರೇಡಿಯೋ ಸಂಪರ್ಕ ವ್ಯವಸ್ಥೆ, ಮಲ್ಟಿ ಮೀಡಿಯಾ, ಭೂ ವಿಜ್ಞಾನ ಮತ್ತು ಪ್ರಾಕೃತಿಕ ವಿಕೋಪ ಸೂಚಕಗಳ ಸೇವೆಗಳು ಇವುಗಳಲ್ಲಿ ಪ್ರಮುಖವಾದವು. ಯಾವುದೇ ಪ್ರತ್ಯೇಕಿತ ಪ್ರದೇಶವನ್ನೂ ಸಂವೇಧಿಸಬಲ್ಲ ಸೂಕ್ಷ್ಮ ಸಂವೇಧಿ ವ್ಯವಸ್ಥೆಗಳನ್ನು ಇಂದು ವ್ಯವಸಾಯ, ಅರಣ್ಯ, ಮೀನುಗಾರಿಕೆ, ಒಣ ಭೂಮಿ, ಅಂತರ್ಜಲ ಮತ್ತು ಮೇಲ್ಮಟ್ಟದ ಜಲಾನಯದ ಪ್ರದೇಶ, ಬರ ಮತ್ತು ಪ್ರವಾಹಗಳಂತಹ ವಿಚಾರಗಳಲ್ಲಿ ವ್ಯಾಪಕವಾಗಿ ಉಪಯೋಗಿಸಲಾಗುತ್ತಿದೆ. ಬಾಹ್ಯಾಕಾಶ ತಂತ್ರಜ್ಞಾನದ ಸಮರ್ಥ ಉಪಯೋಗದ ಸಮಗ್ರ ಯೋಜನೆಗಳನ್ನು ಅತ್ಯಂತ ಸಣ್ಣ ಹಂತದಿಂದ ಮೇಲಿನ ಹಂತದವರೆಗೆ ರೂಪಿಸಿದ ಕೀರ್ತಿ ಕೂಡಾ ಪ್ರೊ. ಯು. ಆರ್. ರಾವ್ ಅವರಿಗೆ ಸಲ್ಲುತ್ತದೆ.

    ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಅಭಿವೃದ್ಧಿ ನಿಗಮದ ಚೇರ್ಮನ್, ಲಕ್ನೋದ ಬಾಬಾ ಸಾಹೇಬ್ ಭೀಮರಾವ್ ಅಂಬೇಡ್ಕರ್ ವಿಶ್ವವಿದ್ಯಾಲಯದ ಕುಲಪತಿ, ಭಾರತೀಯ ರಿಸರ್ವ್ ಬ್ಯಾಂಕಿನ ಕೇಂದ್ರ ನಿರ್ದೇಶಕ ಮಂಡಳಿಯ ಸದಸ್ಯತ್ವ, ಭಾರತೀಯ ರಿಸರ್ವ್ ಬ್ಯಾಂಕಿನ ನೋಟು ಮುದ್ರಣಾ ವಿಭಾಗದ ಹೆಚ್ಚುವರಿ ನಿರ್ದೇಶಕತ್ವ, ಪುಣೆಯಲ್ಲಿರುವ ಭಾರತೀಯ ಪ್ರಾದೇಶಿಕ ಭೂಗರ್ಭ ಅಧ್ಯಯನ ಪೀಠದ ನಿರ್ವಹಣಾ ಕೌನ್ಸಿಲ್ಲಿನ ಚೇರ್ಮನ್, ಗೊವೆಯಲ್ಲಿರುವ ಅಂಟಾರ್ಕ್ಟಿಕ್ ಮತ್ತು ಸಾಗರ ಸಂಶೋಧನಾ ಕೇಂದ್ರದ ಕೋ-ಚೇರ್ಮನ್ ಹೀಗೆ ದೇಶದ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಯು.ಆರ್. ರಾವ್ ಅವರು ಪ್ರಧಾನ ಪಾತ್ರಧಾರಿಗಳಾಗಿದ್ದಾರೆ.
    ವಿಶ್ವದ ವಿವಿಧ ಪ್ರತಿಷ್ಠಿತ ಸಂಸ್ಥೆಗಳು ರಾವ್ ಅವರ ಭಾಗವಹಿಕೆಯನ್ನು ತಮ್ಮ ಸೌಭಾಗ್ಯವೆಂದು ಭಾವಿಸಿವೆ.  1976ರಷ್ಟು ಹಿಂದೆಯೇ ಅವರಿಗೆ ಪದ್ಮಭೂಷಣ ಪ್ರಶಸ್ತಿ ಲಭ್ಯವಾಗಿತ್ತು. 1973ರಲ್ಲಿ ನಾಸಾ ಸಂಸ್ಥೆ ಸಮೂಹ ಪ್ರಶಸ್ತಿ ನೀಡಿತ್ತು. 1975ರಲ್ಲಿ ಅಂದಿನ ಸಂಯುಕ್ತ ಸೋವಿಯತ್ ರಷ್ಯಾದ ಅಕಾಡೆಮಿ ಆಫ್ ಸೈನ್ಸಸ್ ಸಂಸ್ಥೆ ಗೌರವ ಪುರಸ್ಕಾರ ನೀಡಿತ್ತು. ಯೂರಿ ಗಗಾರಿನ್ ಪ್ರಶಸ್ತಿ, ಕರ್ನಾಟಕ ರಾಜ್ಯದ ಹಲವು ಪ್ರಶಸ್ತಿಗಳು, ಹಂಪೆಯ ನಾಡೋಜ ಪ್ರಶಸ್ತಿ, ಜವಹರಲಾಲ್ ನೆಹರೂ ಶತಮಾನೋತ್ಸವ ಪ್ರಶಸ್ತಿ, ವಿಕ್ರಂ ಸಾರಾಬಾಯಿ ಪ್ರಶಸ್ತಿ, ಮೇಘನಾದ ಸಹಾ ಪ್ರಶಸ್ತಿ, ದೇಶದ ಬಹುತೇಕ ರಾಜ್ಯಗಳ ಗೌರವಗಳು, ಹೀಗೆ ಅವರಿಗೆ ಸಂದ ಪ್ರಶಸ್ತಿ ಗೌರವಗಳು ಅಸಂಖ್ಯಾತ. 2005ರ ವರ್ಷದಲ್ಲಿ ಅಂತರರಾಷ್ಟ್ರೀಯ ಆಸ್ತ್ರೋನಾಟಿಕ್ಸ್ ಸಂಸ್ಥೆ ಯು. ಆರ್. ರಾವ್ ಅವರನ್ನು ಅಮೆರಿಕದಲ್ಲಿ ವಿಶಿಷ್ಠ ರೀತಿಯಲ್ಲಿ ಗೌರವಿಸಿತು. ಇದಲ್ಲಕ್ಕೆ 2013ರ ವರ್ಷದ ಮಾರ್ಚ್ ಮಾಸದ 19ರಂದು ಪ್ರೊ. ಯು. ಆರ್. ರಾವ್ ಅವರು ಅಮೆರಿಕದ ಪ್ರತಿಷ್ಠಿತ ‘ಸೆಟಲೈಟ್ ಹಾಲ್ ಆಫ್ ಫೇಮ್’ ಗೌರವಕ್ಕೆ ಪಾತ್ರರಾದರು.

    Share Information
    Advertisement
    Click to comment

    You must be logged in to post a comment Login

    Leave a Reply