Connect with us

LATEST NEWS

ಪಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾ ಖಾತೆಗಳಿಗೆ ₹100 ಕೋಟಿ ಜಮೆ

ಕೊಚ್ಚಿ, ಡಿಸೆಂಬರ್ 25:  ಇತ್ತೀಚೆಗಷ್ಟೇ ದೇಶದಾದ್ಯಂತ ಪಿಎಫ್‌ಐ ಕಚೇರಿ ಹಾಗೂ ಅದರ ಪದಾಧಿಕಾರಿಗಳ ಮನೆಗಳಲ್ಲಿ ಶೋಧ ನಡೆಸಿದ್ದ ಇ.ಡಿ, ಕೇರಳ ಮೂಲದ ಸಂಘಟನೆಯಾದ ಪಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾ(ಪಿಎಫ್‌ಐ) ಬ್ಯಾಂಕ್‌ ಖಾತೆಗಳಿಗೆ ಕಳೆದ ಕೆಲ ವರ್ಷಗಳಿಂದ ₹100 ಕೋಟಿಗೂ ಅಧಿಕ ಹಣ ಜಮೆ ಆಗಿರುವುದು ತನಿಖೆಯ ವೇಳೆ ಪತ್ತೆಯಾಗಿದೆ ಎಂದು ಪಿಎಫ್‌ಐ ವಿರುದ್ಧದ ಹಣ ಅಕ್ರಮ ವರ್ಗಾವಣೆ ಪ್ರಕರಣದ ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯವು(ಇ.ಡಿ) ಇಲ್ಲಿನ ನ್ಯಾಯಾಲಯವೊಂದಕ್ಕೆ ತಿಳಿಸಿದೆ.

ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೆ ಒಳಗಾಗಿರುವ ಪಿಎಫ್‌ಐ ವಿದ್ಯಾರ್ಥಿ ಘಟಕದ ನಾಯಕ ಕೆ.ಎ.ರವೂಫ್‌ ಷರೀಫ್‌ ಕಸ್ಟಡಿಯನ್ನು ವಿಸ್ತರಿಸಲು ಕೋರಿ, ಹಣ ಅಕ್ರಮ ವರ್ಗಾವಣೆ ತಡೆ ವಿಶೇಷ ನ್ಯಾಯಾಲಯಕ್ಕೆ ಇ.ಡಿ ಅಫಿಡವಿಟ್‌ ಸಲ್ಲಿಸಿತು. ಇ.ಡಿ ಅರ್ಜಿಯನ್ನು ಪುರಸ್ಕರಿಸಿದ ನ್ಯಾಯಾಲಯವು, ಷರೀಫ್‌ ಕಸ್ಟಡಿಯನ್ನು ಮೂರು ದಿನ ವಿಸ್ತರಿಸಿದೆ.

ಬೆಂಗಳೂರು ಗಲಭೆಯಲ್ಲಿ ಭಾಗಿ: ತನಿಖೆ ವೇಳೆ ಫೆಬ್ರುವರಿಯಲ್ಲಿ ದೆಹಲಿಯಲ್ಲಿ ನಡೆದ ಗಲಭೆಯಲ್ಲೂ ಪಿಎಫ್‌ಐ ಪಾತ್ರ ಹಾಗೂ ಅದರ ಕಾರ್ಯಕರ್ತರು ಭಾಗಿಯಾಗಿರುವುದು ಬಹಿರಂಗವಾಗಿದೆ. ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದ ಗಲಭೆಯಲ್ಲೂ ಪಿಎಫ್‌ಐ ಪಾತ್ರವಿರುವುದರ ಬಗ್ಗೆ ಲಕ್ಷಣವಿದೆ. ಈ ಗಲಭೆಯಲ್ಲಿ ಪಿಎಫ್‌ಐ ರಾಜಕೀಯ ಘಟಕ, ಎಸ್‌ಡಿಪಿಐ ಭಾಗಿಯಾಗಿರುವುದು ಪತ್ತೆಯಾಗಿದೆ’ ಎಂದು ಉಲ್ಲೇಖಿಸಲಾಗಿದೆ.

ಈ ಹಣವನ್ನು ಸಿಎಎ ಪ್ರತಿಭಟನೆಗೆ ಬಳಸಿರುವ ಸಾಧ್ಯತೆ : ಖಾತೆಗಳಿಗೆ ಜಮೆ ಆದ ಹಣದ ಮೂಲ ಹಾಗೂ ಅದನ್ನು ಯಾವ ಉದ್ದೇಶಕ್ಕಾಗಿ ಬಳಸಿಕೊಳ್ಳಲಾಯಿತು ಎನ್ನುವುದರ ತನಿಖೆ ನಡೆಯುತ್ತಿದೆ. ₹100ಕೋಟಿಗೂ ಅಧಿಕ ಹಣ ಜಮೆ ಆಗಿದ್ದು, ಇದರಲ್ಲಿ ಬಹುಪಾಲು ನಗದು ಮೂಲಕವೇ ಜಮೆ ಆಗಿವೆ. 2013ರಲ್ಲಿ ಪಿಎಫ್‌ಐ ಸಂಘಟಿತ ಅಪರಾಧಗಳಲ್ಲಿ ಭಾಗಿಯಾಗುತ್ತಿದ್ದು, 2014ರ ನಂತರ ಹಣ ವರ್ಗಾವಣೆ, ಜಮೆಯು ಗಣನೀಯವಾಗಿ ಹೆಚ್ಚಾಗಿದೆ. ಪೌರತ್ವ ತಿದ್ದುಪಡಿ ಕಾಯ್ದೆ(ಸಿಎಎ) ವಿರೋಧಿ ಪ್ರತಿಭಟನೆಗಳಲ್ಲೂ ಪಿಎಫ್‌ಐ ಭಾಗಿಯಾಗಿರುವುದು ತನಿಖೆ ವೇಳೆ ಪತ್ತೆಯಾಗಿದ್ದು, 2019 ಡಿಸೆಂಬರ್‌ನಿಂದ 2020 ಫೆಬ್ರುವರಿಯವರೆಗೆ ಪ್ರತಿಭಟನೆಗೆ ಹಣಕಾಸು ನೆರವು ನೀಡಲು ಈ ಹಣವನ್ನು ಬಳಸಿಕೊಂಡಿರುವ ಸಾಧ್ಯತೆ ಇದೆ’ ಎಂದು ಅಫಿಡವಿಟ್‌ನಲ್ಲಿ ಉಲ್ಲೇಖಿಸಲಾಗಿದೆ.

ತಿರುವನಂತಪುರ ವಿಮಾನ ನಿಲ್ದಾಣದಲ್ಲಿ ಎರಡು ವಾರಗಳ ಹಿಂದೆ ಷರೀಫ್‌ ಅವರನ್ನು ಇ.ಡಿ ಬಂಧಿಸಿತ್ತು. ಇತ್ತೀಚೆಗಷ್ಟೇ ದೇಶದಾದ್ಯಂತ ಪಿಎಫ್‌ಐ ಕಚೇರಿ ಹಾಗೂ ಅದರ ಪದಾಧಿಕಾರಿಗಳ ಮನೆಗಳಲ್ಲಿ ಶೋಧ ನಡೆಸಿದ್ದ ಇ.ಡಿ, ಹಲವು ದಾಖಲೆಗಳನ್ನು ಹಾಗೂ ಡಿಜಿಟಲ್‌ ಉಪಕರಣಗಳನ್ನು ವಶಕ್ಕೆ ಪಡೆದುಕೊಂಡಿತ್ತು.

Share Information
Continue Reading
Advertisement
Click to comment

Leave a Reply

Your email address will not be published. Required fields are marked *