ಹಿಂದೂ ಯುವತಿಯ ಬಾಳಿಗೆ ಬೆಳಕಾದ ಮುಸ್ಲೀಂ ಯುವಕರು

ಪುತ್ತೂರು, ಮಾರ್ಚ್ 21 : ಕರಾವಳಿ ಎಂದರೇ ಹಾಗೆನೇ. ಎಲ್ಲಿ ಯಾವಾಗ ಬೇಕಾದರೂ ಏನು ಕೂಡ ಇಲ್ಲಿ ನಡೆಯಬಹುದು. ಈ ಪ್ರದೇಶ ಎಷ್ಟು ಕೋಮು ಸೂಕ್ಷ್ಮಾವೂ ಅಷ್ಟೇ ಕೋಮು ಸೌಹರ್ದತೆಯ ಪ್ರತೀಕ ಕೂಡ ಹೌದು. ಇಂಹಹ ಪ್ರದೇಶ ಮತ್ತೊಮ್ಮೆ ಕೋಮು ಸೌಹಾರ್ದತೆ ಮೆರೆದಿದೆ. ಹೌದು ತೀರಾ ಬಡ ಕುಟುಂಬದ ಹಿಂದೂ ಧರ್ಮದ ಯುವತಿಯ ಮದುವೆಯೊಂದನ್ನು ನೆರೆಯ ಮುಸ್ಲಿಂಮ್ ಭಾಂಧವರೇ ಮುಂದೆ ನಿಂತು ಮಾಡುವ ಮೂಲಕ ಸೌಹಾರ್ದತೆ ಮೆರೆದಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಸಮೀಪದ ಕರುವೇಲು ಎಂಬಲ್ಲಿ ಈ ವಿದ್ಯಮಾನ ನಡೆದಿದೆ.

ತೀರಾ ಬಡ ಕುಟುಂಬದ ರೇವತಿ ಸ್ಥಳೀಯ ಫ್ಯಾಕ್ಟರಿಯೊಂದರಲ್ಲಿ ದುಡಿಯುತ್ತಿದ್ದು, ಈಕೆಗೆ ಸಾಲ್ಮರದ ಯುವಕ ಶರತ್‌ ಎಂಬಾತನೊಂದಿಗೆ ಪ್ರೇಮಾಂಕುರವಾಗಿತ್ತು. ತೀರಾ ಬಡ ಕುಟುಂಬ ಈಕೆಯದ್ದು. ಆ ಕಾರಣದಿಂದ ತಂದೆ ತಾಯಿ ಇದ್ದರೂ ಮುಂದೆ ನಿಂತು ಮದುವೆ ಮಾಡಿಸುವಷ್ಟು ಶಕ್ತರಾಗಿರಲಿಲ್ಲ. ಈ ಪರಿಸ್ಥಿತಿಯಲ್ಲಿ ದಿನ ದೂಡುತ್ತಿರುವಾಗ ಅವರ ನೆರವಿಗೆ ಬಂದಿದ್ದು, ಅವರ ಮನೆ ಸಮೀಪದ ಮುಸ್ಲಿಂ ಯುವಕರು. ಮಾನವೀಯತೆಯ ನಂಟಿನಿಂದ ಈ ಯುವಕರು ಹುಡುಗಿಯ ಪರವಾಗಿ ಹುಡುಗನ ಮನೆಯವರನ್ನು ಮಾತನಾಡಿಸಿದ್ದಾರೆ.

ಮದುವೆಗೆ ದಿನ ಕೂಡ ಇವರೇ ಫಿಕ್ಸ್ ಮಾಡಿದ್ದಾರೆ. ಯುವತಿಯ ಕೆಲ ಬಂಧುಗಳು ಕೂಡಿಕೊಂಡು. ಅಕ್ಕ ಪಕ್ಕದ ಮನೆಗಳಿಂದ ತಾಳೆ ಗರಿಗಳನ್ನು ತಂದು ಚಪ್ಪರ ಕೂಡ ಹಾಕಿದ್ದಾರೆ. ಲತೀಫ್‌ ಎಂಬವರ ಮನೆಯಲ್ಲಿ ಮದುಮಗಳಾದ ರೇವತಿಯನ್ನು ವಧುವಿನಂತೆ ಶೃಂಗರಿಸಿ ಹಿಂದೂ ಸಂಪ್ರದಾಯದಂತೆ ವಿವಾಹ ಶಾಸ್ತ್ರವನ್ನು ನೆರವೇರಿಸಿದ್ದಾರೆ.

ಮಾಂಗಲ್ಯ ಸೂತ್ರ, ಮದುಮಗಳ 2 ಜತೆ ವಸ್ತ್ರವನ್ನೊಳಗೊಂಡಂತೆ ಎಲ್ಲ ಕಾರ್ಯಕ್ಕೆ ತಗುಲಿದ ವೆಚ್ಚವನ್ನು ಸ್ಥಳೀಯ ಲತೀಫ್‌ ನಿಹಾ ಡ್ರೆಸ್ಸಸ್‌ನ ಮಾಲೀಕ ಕೆ. ಅಬೂಬಕ್ಕರ್‌, ಶಬೀರ್‌, ಅಶ್ರಫ್‌, ಕಬೀರ್‌, ಶಮೀರ್‌, ಪುತ್ತುಮೋನು ಮತ್ತಿತರರು ಭರಿಸಿ ಮಾನವೀಯತೆ ಮೆರೆದಿದ್ದಾರೆ.

ಮದುವೆಯ ಅಂಗವಾಗಿ ಸುಮಾರು 150 ಮಂದಿ ಬೀಗರಿಗೆ ಊಟವನ್ನೂ ಸಿದ್ಧಪಡಿಸಿ ಉಣಬಡಿಸಿದ್ದಾರೆ ಈ ಮುಸ್ಲೀಂ ಹುಡುಗರು. ಬಡತನದ ಬೇಗೆಯಿಂದ ಬಳಲಿ ಬೆಂಡಾಗಿದ್ದ ಹೆಣ್ಣುಮಗಳ ಬಾಳಿಗೆ ಬೆಳಕಾಗುವ ಮೂಲಕ ಈ ಮುಸ್ಲಿಂ ಯುವಕರ ಕಾರ್ಯ ಸಾರ್ವಜನಿಕರ ಶ್ಲಾಘನೆಗೆ ಪಾತ್ರವಾಗಿರುವುದರ ಜೊತೆಗೆ ಇತರರರಿಗೂ ಮಾದರಿಯಾಗಿದ್ದಾರೆ.