Connect with us

    LATEST NEWS

    ಸರ್ಜಿಕಲ್ ಸ್ಟ್ರೈಕ್‍ ವೀರಯೋಧನ ಚಿಕಿತ್ಸೆಗೆ ನೆರವಾದ ಯು.ಟಿ. ಖಾದರ್

    ಸರ್ಜಿಕಲ್ ಸ್ಟ್ರೈಕ್‍ ವೀರಯೋಧನ ಚಿಕಿತ್ಸೆಗೆ ನೆರವಾದ ಯು.ಟಿ. ಖಾದರ್

    ಮಂಗಳೂರು ನವೆಂಬರ್ 6 :- ಹಾವು ಕಡಿತಕ್ಕೊಳಗಾಗಿ ಚಿಂತಾಜನಕ ಸ್ಥಿತಿಯಲ್ಲಿದ್ದ ಭಾರತೀಯ ಸೇನಾ ಯೋಧನ ನೆರವಿಗೆ ಮಧ್ಯರಾತ್ರಿ ಧಾವಿಸಿ, ತುರ್ತು ಚಿಕಿತ್ಸೆ ಒದಗಿಸುವಲ್ಲಿ ಸಹಕಾರ ನೀಡಿ ಆಹಾರ ಮತ್ತು ನಾಗರೀಕ ಸರಬರಾಜು ಸಚಿವ ಯು.ಟಿ. ಖಾದರ್ ಮಾನವೀಯತೆ ಮೆರೆದಿದ್ದಾರೆ.

    ಇಲ್ಲಿನ ಮುಡಿಪು ಬಳಿಯ ಕೊಡಕಲ್ಲು ನಿವಾಸಿ ಯೋಧ ಸಂತೋಷ್ ಕುಮಾರ್ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ಭಾನುವಾರ ಸ್ವಗ್ರಾಮಕ್ಕೆ ಬಂದಿದ್ದರು. ಅಲ್ಲಿ ಅವರು ಹಾವು ಕಡಿತದಿಂದ ಗಾಯಗೊಂಡಿದ್ದರು. ಈ ವರ್ಷದ ಆರಂಭದಲ್ಲಿ ಕಾಶ್ಮೀರದಲ್ಲಿ ಉಗ್ರರ ದಾಳಿಯಲ್ಲಿ ಸಂತೋಷ್ ಗಾಯಗೊಂಡಿದ್ದರು. ಈ ನಡುವೆ ಹಾವು ಕಡಿತದಿಂದ ಅವರ ಸ್ಥಿತಿ ಗಂಭೀರವಾಗಿತ್ತು.

    ಕೂಡಲೇ ಕುಟುಂಬದ ಸದಸ್ಯರು ಸಂತೋಷ್ ಅವರನ್ನು ಫಾದರ್ ಮುಲ್ಲರ್ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆಗೆ ಬೇಕಾದ ಇಂಜೆಕ್ಷನ್ ಆಸ್ಪತ್ರೆಯಲ್ಲಿರದ ಕಾರಣ ಚಿಕಿತ್ಸೆ ವಿಳಂಬವಾಗುವುದರಲ್ಲಿತ್ತು. ಈ ನಡುವೆ ಸಂತೋಷ್ ಅವರ ತಮ್ಮ ಸಚಿವ ಯು.ಟಿ ಖಾದರ್ ಅವರಿಗೆ ಮೊಬೈಲ್ ಕರೆ ಮಾಡಿ ವಿಷಯ ತಿಳಿಸಿದ್ದಾರೆ.

    ಆ ಕೂಡಲೇ ಸಚಿವರು ಮಧ್ಯರಾತ್ರಿ 1.15 ಗಂಟೆಗೆ ನೇರವಾಗಿ ಫಾದರ್ ಮುಲ್ಲರ ಆಸ್ಪತ್ರೆಗೆ ಧಾವಿಸಿ ಯೋಧನ ಕುಟುಂಬಸ್ಥರನ್ನು ಭೇಟಿ ಮಾಡಿ ತುರ್ತು ಚಿಕಿತ್ಸಾ ಘಟಕದಲ್ಲಿ ಯೋಧನ ಆರೋಗ್ಯ ವಿಚಾರಿಸಿದರು. ನಂತರ ವೈದ್ಯರೊಂದಿಗೆ ಸಮಾಲೋಚನೆ ನಡೆಸಿದ ಸಚಿವ ಯು.ಟಿ ಖಾದರ್ ಆತನಿಗೆ ತುರ್ತಾಗಿ ಚಿಕಿತ್ಸೆಗೆ ಬೇಕಾದ 10 ಇಂಜೆಕ್ಷನ್ ಗಳನ್ನು ವೆನ್ಲಾಕ್ ಆಸ್ಪತ್ರೆಯಿಂದ ತರಿಸುವ ಏರ್ಪಾಡು ಮಾಡಿದರು. ನಂತರ ಯೋಧನಿಗೆ ಚಿಕಿತ್ಸೆ ನೀಡಲಾಗಿದೆ. ಇದೀಗ ಸಂತೋಷ್ ಕುಮಾರ್ ಚೇತರಿಸಿಕೊಳ್ಳುತ್ತಿದ್ದಾರೆ.

    ಇಂದು ಬೆಳಿಗ್ಗೆಯೂ ಸಚಿವ ಯು.ಟಿ ಖಾದರ್ ಆಸ್ಪತ್ರೆಗೆ ಭೇಟಿ ನೀಡಿ ಸಂತೋಷ್ ಆರೋಗ್ಯ ವಿಚಾರಿಸಿದರು.

    ಸಂತೋಷ್ ಕುಮಾರ್ ಭಾರತೀಯ ಸೇನೆಯ ಯೋಧರಾಗಿದ್ದು, ಕಳೆದ ವರ್ಷ ಕಾಶ್ಮೀರದಲ್ಲಿ ಪಾಕಿಸ್ತಾನ ವಿರುದ್ಧ ನಡೆದ ಸರ್ಜಿಕಲ್ ಸ್ಟ್ರೈಕ್‍ನಲ್ಲಿ ಪಾಲ್ಗೊಂಡಿದ್ದರು. ಕೌಟುಂಬಿಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಅವರು ಮುಡಿಪು ಕೊಡಕಲ್ಲಿಗೆ ಆಗಮಿಸಿದ್ದರು.

    Share Information
    Advertisement
    Click to comment

    You must be logged in to post a comment Login

    Leave a Reply