LATEST NEWS
ಸಮಾನ ನ್ಯಾಯ ವ್ಯವಸ್ಥೆ ಸಂವಿಧಾನದ ಆಶಯ- ಲೋಕಾಯುಕ್ತ ನ್ಯಾಯಮೂರ್ತಿ ಪಿ. ವಿಶ್ವನಾಥ ಶೆಟ್ಟಿ
ಸಮಾನ ನ್ಯಾಯ ವ್ಯವಸ್ಥೆ ಸಂವಿಧಾನದ ಆಶಯ- ಲೋಕಾಯುಕ್ತ ನ್ಯಾಯಮೂರ್ತಿ ಪಿ. ವಿಶ್ವನಾಥ ಶೆಟ್ಟಿ
ಉಡುಪಿ, ನವೆಂಬರ್ 18: ಕಾನೂನು ನೆರವು ಪ್ರಾಧಿಕಾರಕ್ಕೆ ಅಪರಾಧಿಗಳಿಗೆ ಶಿಕ್ಷೆ ನೀಡುವ ಅಧಿಕಾರವಿಲ್ಲದಿದ್ದರೂ , ಆರೋಪ ಅಥವಾ ಅಪರಾಧಿಗಳ ಬಗ್ಗೆ ಲೋಕಾಯುಕ್ತದ ಮುಖಾಂತರ ಶಿಕ್ಷೆ ವಿಧಿಸುವ ಅವಕಾಶವಿದೆ ಎಂದು ಕರ್ನಾಟಕ ಲೋಕಾಯುಕ್ತ ನ್ಯಾಯ ಮೂರ್ತಿ ಪಿ.ವಿಶ್ವನಾಥ ಶೆಟ್ಟಿ ಹೇಳಿದ್ದಾರೆ.
ಉಡುಪಿ ಜಿಲ್ಲಾಡಳಿತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘ ಪೊಲೀಸ್ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ಶನಿವಾರ ಜಿಲ್ಲಾ ನ್ಯಾಯಾಲಯ ಸಂಕೀರ್ಣದ ಆವರಣದಲ್ಲಿ ನಡೆದ `ಸೇವೆಗಾಗಿ ಸಂಪರ್ಕ’ ಕಾನೂನು ಮಾಹಿತಿ ಜಾಗೃತಿ ಆಂದೋಲನದ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ವ್ಯವಸ್ಥೆಯು ಇಂದು ಮಲಿನಗೊಂಡಿದ್ದು, ಇದಕ್ಕೆ ಸರ್ಕಾರಿ ಅಧಿಕಾರಿಗಳನ್ನೇ ಹೊಣೆ ಮಾಡದೆ ಎಲ್ಲರೂ ಸೇರಿ ಸಮಾಜದ ಸ್ವಾಸ್ಥ್ಯವನ್ನು ಉತ್ತಮಪಡಿಸುವ ಅಗತ್ಯವಿದೆ ಎಂದು ಈ ಸಂದರ್ಭದಲ್ಲಿ ಅವರು ನುಡಿದರು.
ಹಲವು ಕಾರಣಗಳಿಂದ ನ್ಯಾಯ ವಿಳಂಬವಾಗುತ್ತಿರುವ ಈ ದಿನಗಳಲ್ಲಿ ಲೋಕ ಅದಾಲತ್ ಮೂಲಕ ನೊಂದವರು ನ್ಯಾಯಪಡೆಯುವುದರಿಂದ ಶೀಘ್ರ ನ್ಯಾಯ ಪಡೆಯಲು ಸಾಧ್ಯ ಎಂದರು. ಉಳಿದ ಕೋರ್ಟ್‍ಗಳಲ್ಲಿನ ನಿರ್ಧಾರವನ್ನು ಮತ್ತೆ ಪ್ರಶ್ನಿಸುವ ಅವಕಾಶವಿದ್ದರೆ ಲೋಕ ಅದಾಲತ್‍ನಲ್ಲಿ ದೊರೆತ ನ್ಯಾಯಕ್ಕೆ ಅಪೀಲು ಹಾಕುವಂತಿಲ್ಲ ಎಂದು ಲೋಕಾಯುಕ್ತರು ಹೇಳಿದರು.
ರಾಜ್ಯದಲ್ಲಿ ಮಹಿಳೆಯರು ಮತ್ತು ಮಕ್ಕಳು ನಾಪತ್ತೆಯಾಗುತ್ತಿರುವ ವಿಚಾರ ಲೋಕಾಯುಕ್ತದ ಗಮನಕ್ಕೆ ಬಂದಿದ್ದು, ಸಂಬಂಧಪಟ್ಟ ಇಲಾಖೆಗಳಿಂದ ಮಾಹಿತಿಯನ್ನು ತರಿಸಲಾಗಿದ್ದು, ಸಾಮಾಜಿಕ ಅನಿಷ್ಠಗಳ ತಡೆಗೆ ಕ್ರಮಕೈಗೊಳ್ಳಲಾಗುವುದು. ಆದರೆ ಇದು ಕೇವಲ ಸರ್ಕಾರದಿಂದ ಮಾತ್ರ ಸಾಧ್ಯವಾಗುವ ಕೆಲಸವಾಗಿರದೆ ಸಾರ್ವಜನಿಕರ ಸಹಕಾರ ಅಗತ್ಯ ಎಂದು ಅವರು ಈ ಸಂದರ್ಭದಲ್ಲಿ ಅಭಿಪ್ರಾಯಪಟ್ಟರು.
You must be logged in to post a comment Login