ನಿಗದಿತ ಅವಧಿಗೂ ಮುನ್ನ ಶಬರಿಮಲೆ ಅರಣ್ಯ ಮಾರ್ಗ ತೆರೆಯಲು ಕೇರಳ ಹೈಕೋರ್ಟ್‌ ನಿರಾಕರಿಸಿದ್ದು ನ್ಯಾಯಮೂರ್ತಿಗಳಾದ ರಾಜಾ ವಿಜಯರಾಘವನ್ ವಿ ಮತ್ತು ನ್ಯಾಯಮೂರ್ತಿ ಕೆ ವಿ ಜಯಕುಮಾರ್ ಅವರಿದ್ದ ಪೀಠ ಈ ಆದೇಶ ನೀಡಿದೆ.

ಶಬರಿಮಲೆ:  ನಿಗದಿತ ಅವಧಿಗೂ ಮುನ್ನ ಶಬರಿಮಲೆ ಅರಣ್ಯ ಮಾರ್ಗ ತೆರೆಯಲು ಕೇರಳ ಹೈಕೋರ್ಟ್‌ ನಿರಾಕರಿಸಿದ್ದು ನ್ಯಾಯಮೂರ್ತಿಗಳಾದ ರಾಜಾ ವಿಜಯರಾಘವನ್ ವಿ ಮತ್ತು ನ್ಯಾಯಮೂರ್ತಿ ಕೆ ವಿ ಜಯಕುಮಾರ್ ಅವರಿದ್ದ ಪೀಠ ಈ ಆದೇಶ ನೀಡಿದೆ.

ಶಬರಿಮಲೆ ದೇವಸ್ಥಾನಕ್ಕೆ ಸಾಂಪ್ರದಾಯಿಕ ಅರಣ್ಯ ಚಾರಣ ಮಾರ್ಗವನ್ನು ಅಥವಾ ‘ಕಾನನ ಪಥ’ವನ್ನು ಅಧಿಕಾರಿಗಳು ನಿಗದಿಪಡಿಸಿದ ಅವಧಿಗೆ ಮುನ್ನವೇ ಸಂಚಾರಕ್ಕೆ ಮುಕ್ತಗೊಳಿಸುವಂತೆ ಆದೇಶಿಸಲಾಗದು ಎಂದು  ಪೀಠ ಸ್ಪಷ್ಟಪಡಿಸಿದೆ.

ಭಕ್ತರ ಸುರಕ್ಷತೆ ಹಾಗೂ ಪರಿಸರ ಸೂಕ್ಷ್ಮ ಪ್ರದೇಶವಾಗಿರುವ ಹುಲಿ ಅಭಯಾರಣ್ಯ ರಕ್ಷಣೆಯಂತಹ ಅನೇಕ ಅಂಶಗಳನ್ನು ಪರಿಗಣಿಸಿ ಮಾರ್ಗವನ್ನು ಭಕ್ತರ ಸಂಚಾರಕ್ಕೆ ತೆರೆಯುವ ಅವಧಿ ನಿಗದಿಪಡಿಸಲಾಗಿದೆ .ಮಾರ್ಗ ತೆರೆಯುವ ಅವಧಿಯನ್ನು ಗಮನಿಸಿಯೇ ಯಾತ್ರಿಕರು ಶಬರಿಮಲೆಗೆ ಪ್ರಯಾಣ ಬೆಳೆಸಬೇಕೆಂದು ನ್ಯಾಯಾಲಯ ಸಲಹೆ ನೀಡಿದೆ.  ಆಡಳಿತ, ಸಂಚಾರ ಹಾಗೂ ಸುರಕ್ಷತೆಯನ್ನು ನಿರ್ಲಕ್ಷಿಸಿ ಮಾರ್ಗವನ್ನು ಮೊದಲೇ ತೆರೆಯಬೇಕೆಂದು ಭಕ್ತರು ಒತ್ತಾಯಿಸುವಂತಿಲ್ಲ ಅರಣ್ಯ ಮಾರ್ಗದ ಮೂಲಕವಲ್ಲದೆ ದೇವಾಲಯ ತಲುಪಲು ಬೇರೆ ಮಾರ್ಗಗಳಿವೆ ಎಂತಲೂ ನ್ಯಾಯಾಲಯ ಹೇಳಿದೆ.

ನಿರ್ದಿಷ್ಟ ಅರಣ್ಯ ಮಾರ್ಗದಲ್ಲಿ ದೇವಾಲಯ ತಲುಪುವ ವಿಧಾನವು ಸಂವಿಧಾನದ 25ನೇ ವಿಧಿಯಡಿ ಭಕ್ತರ ಮೂಲಭೂತ ಹಕ್ಕಿನ ಭಾಗ ಎಂದು ಪರಿಗಣಿಸುವಷ್ಟು ಅತ್ಯಾವಶ್ಯಕ ಧಾರ್ಮಿಕ ಆಚರಣೆಯಲ್ಲ ಎಂದು ಅದು ಹೇಳಿದೆ.

ತೀರ್ಥಯಾತ್ರೆಯನ್ನು ಪೂರ್ಣಗೊಳಿಸಲು ಎರುಮೇಲಿ ಕಾಡಿನ ಮೂಲಕವೇ ಹಾದು ಬರಬೇಕು ಎಂದು ಯಾವುದೇ ಧರ್ಮ ಗ್ರಂಥ ಆದೇಶಿಸುವುದಿಲ್ಲ. ಹಿಂದೆ ರಸ್ತೆಗಳಿಲ್ಲದ ಸಂದರ್ಭದಲ್ಲಿ ಎರುಮೇಲಿ ಮೂಲಕವೇ ಸಾಗಬೇಕಾದುದು ಅನಿವಾರ್ಯವಾಗಿತ್ತು. ಯಾವುದೇ ಸಂದರ್ಭದಲ್ಲೂ, ದೇವಾಲಯಕ್ಕೆ ಈ ಮಾರ್ಗವನ್ನು ಅತ್ಯಾವಶ್ಯಕ ಧಾರ್ಮಿಕ ಆಚರಣೆ ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ನವೆಂಬರ್ 13ರಂದು ನೀಡಿದ ಆದೇಶದಲ್ಲಿ ನ್ಯಾಯಾಲಯ ತಿಳಿಸಿದೆ.

ಆದ್ದರಿಂದ, ನವೆಂಬರ್ 15 ರೊಳಗೆ ಮಾರ್ಗ ತೆರೆಯುವಂತೆ ಕೋರಿ ದೆಹಲಿ ಮೂಲದ ವಕೀಲ ಮತ್ತು ಭಕ್ತ ವಿ ಶ್ಯಾಮ್‌ ಮೋಹನ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿತು.

ದೇವಸ್ಥಾನ ತಲುಪುವ ಅರಣ್ಯ ಮಾರ್ಗ ಪೆರಿಯಾರ್ ಹುಲಿ ಅಭಯಾರಣ್ಯದ ಮೂಲಕ ಹಾದುಹೋಗುತ್ತದೆ. ಹುಲಿ, ಆನೆ, ಚಿರತೆ ಹಾಗೂ ಇನ್ನಿತರ ವನ್ಯಜೀವಿಗಳು ಇಲ್ಲಿ ವಾಸಿಸುತ್ತವೆ ಎಂಬ ವಾದ ಪರಿಗಣಿಸಿದ ನ್ಯಾಯಾಲಯ ಹಿಂದೆ ಮನಸ್ಸಿಗೆ ಬಂದಂತೆ ಭಕ್ತರು ಅರಣ್ಯದಲ್ಲಿ ಸಂಚರಿಸಿದ್ದರಿಂದ ಪರಿಸರ ನಾಶ, ಮಾನವ ವನ್ಯಜೀವಿ ಸಂಘರ್ಷ, ಕಾಲ್ತುಳಿತ ಉಂಟಾಗಿ ಅನೇಕರು ಪ್ರಾಣ ಕಳೆದುಕೊಂಡಿದ್ದರು. ಆದ್ದರಿಂದ, ಅರಣ್ಯ ಸಂರಕ್ಷಣೆ ಹಾಗೂ ಯಾತ್ರಿಕರ ಸುರಕ್ಷತೆಗಾಗಿ ಅಧಿಕಾರಿಗಳು ಕೈಗೊಂಡ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಅವಶ್ಯಕತೆಯಿದೆ ಎಂದು ಅಭಿಪ್ರಾಯಪಟ್ಟಿದೆ.

Share Information