ಲಂಚ ಸ್ವೀಕಾರ ಆರೋಪ ಸಾಬೀತು : ಗ್ರಾಮ ಕರಣಿಕ ಸೇರಿ ಇಬ್ಬರಿಗೆ ಶಿಕ್ಷೆ

ಬಂಟ್ವಾಳ, ಫೆಬ್ರವರಿ 06 :: ಜಮೀನಿನ ಖಾತಾ ಬದಲಾವಣೆ ಮಾಡಲು ಲಂಚದ ಬೇಡಿಕೆಯನ್ನಿಟ್ಟಿದ್ದ ಗ್ರಾಮ ಕರಣಿಕ ಹಾಗೂ ಮಧ್ಯವರ್ತಿಗೆ ನ್ಯಾಯಾಲಯ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ,

31-10-2011 ರಂದು ಈ ಪ್ರಕರಣ ಸಂಭವಿಸಿದ್ದು, ಬಂಟ್ವಾಳದ ಮಹಿಳೆ ಸುನೀತಾ ಡಿ’ಸೋಜ ಎಂಬವರಿಂದ ಲಂಚಕ್ಕೆ ಬೇಡಿಕೆ ಇಟ್ಟು ರೂ. 3,000/- ಲಂಚ ಪಡೆದ ಆರೋಪದ ಮೇಲೆ ಬಂಟ್ವಾಳ ತಾಲೂಕು ನಾವೂರು ಗ್ರಾಮ ಪಂಚಾಯತ್ ನಲ್ಲಿ ಗ್ರಾಮ ಕರಣಿಕ ಎನ್ ಹೊನ್ನಪ್ಪ ಮತ್ತು ಮತ್ತು ಮಧ್ಯವರ್ತಿಯಾಗಿದ್ದ ವ್ಯಕ್ತಿ ವಿಕ್ಟರ್ ಪಿಂಟೋ ಎಂಬವರಿಗೆ ಮಂಗಳೂರು ಲೋಕಾಯುಕ್ತ ಕೋರ್ಟ್ ಶಿಕ್ಷೆ ನೀಡಿದೆ.

ಮೂರು ಸಾವಿರ ಲಂಚ ಪಡೆಯುತ್ತಿದ್ದಾಗ ಲೋಕಾಯುಕ್ತ ಬಲೆಗೆ ಬಿದ್ದಿದ್ದ ಆರೋಪಿ ಎನ್ ಹೊನ್ನಪ್ಪ (33 ವರ್ಷ) ಮತ್ತು ಲಂಚ ಪಡೆಯಲು ಸಹಕರಿಸಿದ ಖಾಸಗಿ ವ್ಯಕ್ತಿ ಆರೋಪಿ ವಿಕ್ಟರ್ ಪಿಂಟೋ (75 ವರ್ಷ). ಮೂರನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಹಾಗೂ ಲೋಕಾಯುಕ್ತ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಬಿ. ಮುರಳಿಧರ ಪೈ ಅವರು ಶಿಕ್ಷೆ ಪ್ರಕಟಿಸಿದ್ದಾರೆ. ಭ್ರಷ್ಟಾಚಾರ ನಿಗ್ರಹ ಖಾಯಿದೆಯ ಕಲಂ 7 ರ ಅಡಿ ಯಲ್ಲಿ ಎಸಗಿದ ಅಪರಾಧಕ್ಕೆ ಗ್ರಾಮ ಕರಣಿಕ ಎನ್ ಹೊನ್ನಪ್ಪನಿಗೆ 1 ವರ್ಷ ಸಾದಾ ಸಜೆ ಮತ್ತು 10,000/- ದಂಡ. ಕಲಂ 13 (1) (ಡಿ) ಯಲ್ಲಿ ಎಸಗಿದ ಅಪರಾಧಕ್ಕೆ ಎನ್ ಹೊನ್ನಪ್ಪನಿಗೆ 1 ವರ್ಷ ಸಾದಾ ಸಜೆ ಮತ್ತು 10,000/- ದಂಡ ವಿಧಿಸಿದ್ದರೆ, ಮತ್ತೋರ್ವ ಆರೋಪಿ ವಿಕ್ಟರ್ ಪಿಂಟೋ ವೃದ್ದರಾಗಿರುವ ಕಾರಣಮತ್ತು ಅನಾರೋಗ್ಯದಿಂದ ಬಳಲುತ್ತಿರುವ ಕಾರಣ ಸದ್ರಿ ಆರೋಪಿಗೆ ಕಲಂ 8 ರಡಿಯಲ್ಲಿ ಎಸಗಿದ ಅಪರಾದಕ್ಕೆ 9 ದಿನಗಳ ಸಾದಾ ಸಜೆ ಮತ್ತು ರೂ. 5,000/- ದಂಡ ವಿಧಿಸಿದ್ದಾರೆ . ಎರಡೂ ಆರೋಪಿಗಳು ದಂಡ ತೆರಲು ತಪ್ಪಿದಲ್ಲಿ 3 ತಿಂಗಳ ಸಾದಾ ಸಜೆ ಅನುಭವಿಸಬೇಕೆಂದು ನ್ಯಾಯಾಲಯ ಆದೇಶಿಸಿದೆ. ಆಗಿನ ಲೋಕಾಯುಕ್ತ ಇನ್ಸ್ಪೆಕ್ಟರ್ ಉದಯ ಎಮ್. ನಾಯಕ್ ಅವರ ನೇತೃತ್ವದಲ್ಲಿ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದರು.

Facebook Comments

comments