ಮಂಗಳೂರು,ಜುಲೈ 24: ರಾಜ್ಯ ಸಚಿವ ಸಂಪುಟ ಪುನರ್ ರಚನೆ ಶ್ರೀಘ್ರದಲ್ಲೇ ನಡೆಯಲಿದ್ದು, ಕಾಂಗ್ರೇಸ್ ಹೈಕಮಾಂಡ್ ಇದಕ್ಕೆ ತನ್ನ ಸಮ್ಮತಿಯನ್ನೂ ನೀಡಿದ ಹಿನ್ನಲೆಯಲ್ಲಿ ಹೊಸ ಮುಖಗಳು ಮುಖ್ಯಮಂತ್ರಿ ಸಿದ್ಧರಾಮಯ್ಯ ಸಂಪುಟಕ್ಕೆ ಸೇರ್ಪಡೆಗೊಳ್ಳಲಿದ್ದಾರೆ. ಮಹತ್ತರ ಬೆಳವಣಿಗೆಯಲ್ಲಿ ಹಿರಿಯ ಸಚಿವರು ಹಾಗೂ ದಕ್ಷಿಣಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ರಮಾನಾಥ ರೈ ಪ್ರಮುಖವಾದ ಗೃಹಖಾತೆ ಒಲಿಯುವ ನಿರೀಕ್ಷೆ ಹೆಚ್ಚಾಗಿದೆ. ಈ ಹಿನ್ನಲೆಯಲ್ಲಿ ಈಗಾಗಲೇ ಮುಖ್ಯಮಂತ್ರಿಗಳು

ಸಚಿವರೊಂದಿಗೆ ಒಂದು ಸುತ್ತಿನ ಮಾತುಕತೆ ನಡೆದಿದೆ. ರಾಜ್ಯ ಅರಣ್ಯ ಹಾಗೂ ಪರಿಸರ,ಜೀವಿಶಾಸ್ತ್ರ ಇಲಾಖೆ ಸಚಿವರಾದ ಬಿ . ರಮಾನಾಥ ರೈ ಯವರು ವಿವಿಧ ಖಾತೆಗಳನ್ನು ನಿಭಾಯಿಸಿದ ಅನುಭವವನ್ನೂ ಹೊಂದಿದ್ದಾರೆ. ಬಂಟ್ವಾಳ ವಿಧಾನಸಭಾ ಕ್ಷೇತ್ರದಿಂದ 6 ಬಾರಿ ಶಾಸಕರಾಗಿ ಆಯ್ಕೆಯಾಗಿರುವ ರಮಾನಾಥ ರೈಯವರು ಈ ಹಿಂದೆ ವೀರಪ್ಪ ಮೊಯಿಲಿ ಯವರ ಸಂಪುಟದಲ್ಲಿ ಸಹಾಯಕ ಗೃಹಖಾತೆಯನ್ನು ನಿಭಾಯಿಸಿದ ಅನುಭವ ಹೊಂದಿದ್ದು, ಈ ಹಿನ್ನಲೆಯಲ್ಲಿ ಮುಖ್ಯಮಂತ್ರಿಗಳು ಪ್ರಮುಖ ಖಾತೆಯಾದ ಗೃಹ ಇಲಾಖೆಗೆ ರಮಾನಾಥ ರೈಯವರ ಹೆಸರನ್ನೇ ಶಿಫಾರಸ್ಸು ಮಾಡಿದ್ದಾರೆ ಎನ್ನುವ ಮಾಹಿತಿಗಳು ಲಭ್ಯವಾಗಿದೆ. ನಾಳೆ ದೆಹಲಿಯಿಂದ ಪಕ್ಷದ ಹೈಕಮಾಂಡ್ ಜವಾಬ್ದಾರಿ ಹೊತ್ತ ಸದಸ್ಯರು ಬೆಂಗಳೂರಿಗೆ ಆಗಮಿಸುವ ನಿರೀಕ್ಷೆಯಿದೆ. ಈ ಕಾರಣಕ್ಕಾಗಿಯೇ ರಮಾನಾಥ ರೈಗಳು ನಾಳೆ ಅಪರಾಹ್ನದ ವಿಮಾನದಲ್ಲಿ ಬೆಂಗಳೂರಿಗೆ ಪ್ರಯಾಣಿಸಲಿದ್ದು, ಮುಖ್ಯಮಂತ್ರಿ, ಹೈಕಮಾಂಡ್ ನಡುವೆ ನಡೆಯುವ ಚರ್ಚೆಯ ಬಳಿಕ ಈ ಬಗ್ಗೆ ಸ್ಪಷ್ಟ ಚಿತ್ರಣ ಮೂಡಿಬರಲಿದೆ.
ಗೃಹಖಾತೆಯ ಜವಾಬ್ದಾರಿಯನ್ನು ರಮಾನಾಥ ರೈಯವರಿಗೆ ನೀಡುವ ಆಸಕ್ತಿ ಮುಖ್ಯಮಂತ್ರಿ ಸಿದ್ಧರಾಮಯ್ಯನವರಿಗೆ ಇದ್ದರೂ, ಖಾತೆಯನ್ನು ಒಪ್ಪಿಕೊಳ್ಳಲು ರಮಾನಾಥ ರೈಗಳು ಹಿಂದೇಟು ಹಾಕುವ ಸಾಧ್ಯತೆಯು ಹೆಚ್ಚಾಗಿದೆ. ಆರೋಗ್ಯದ ಸಮಸ್ಯೆ, ಜಿಲ್ಲೆಯಲ್ಲಿ ಹಾಗೂ ಸ್ವಕ್ಷೇತ್ರ ಬಂಟ್ವಾಳದಲ್ಲಿ ಇತ್ತೀಚೆಗೆ ನಡೆಯುತ್ತಿರುವ ರಾಜಕೀಯ ಹಾಗೂ ಮತೀಯ ಬೆಳವಣಿಗೆಗಳು ರೈ ರಾಜಕೀಯದ ಮೇಲೆ ದಟ್ಟ ಪರಿಣಾಮ ಬೀಳಲಿದೆ. ಇನ್ನೊಂದೆಡೆ ವಿಧಾನಸಭಾ ಚುನಾವಣೆಯು ಹತ್ತಿರ ಬರುತ್ತಿರುವ ಕಾರಣ ಗೃಹಖಾತೆಯನ್ನು ನಿಭಾಯಿಸಲು ಹೆಚ್ಚಿನ ಸಮಯವನ್ನು ರಾಜಧಾನಿ ಬೆಂಗಳೂರಿನಲ್ಲೇ ಕಳೆಯಬೇಕಾಗಿರುವುದರಿಂದ ಸ್ವ ಕ್ಷೇತ್ರ ಬಂಟ್ವಾಳಕ್ಕೆ ಗಮನಕೊಡಲು ಸಾಧ್ಯವಾಗದ ಹಿನ್ನಲೆಯಲ್ಲಿ ಇದು ಚುನಾವಣೆಯಲ್ಲಿ ತನ್ನ ಗೆಲುವಿಗೆ ಹಿನ್ನಡೆಯಾಗುತ್ತದೆ ಎಂದು ಮನಗಂಡಿರುವ ರೈಗಳು ಗೃಹಖಾತೆಯನ್ನು ನಯವಾಗಿ ತಿರಸ್ಕರಿಸುವ ಪ್ರಮೇಯವೇ ಹೆಚ್ಚಾಗಿದೆ.
ಈ ಮಧ್ಯೆ ಮುಖ್ಯಮಂತ್ರಿ ಸಿದ್ಧರಾಮಯ್ಯನವರ ಆಪ್ತವಲಯದಲ್ಲಿ ಗುರುತಿಸಿಕೊಂಡಿರುವ ಕರಾವಳಿಯ ಮತ್ತೋರ್ವ ನಾಯಕ ಐವನ್ ಡಿಸೋಜಾ ಗೆ ಸಚಿವ ಸ್ಥಾನ ಒಲಿಯುವುದು ಖಾತರಿಯಾಗಿದೆ. ಸಿದ್ಧರಾಮ್ಯನವರ ಆಪ್ತ ಎನ್ನುವ ಕಾರಣಕ್ಕಾಗಿಯೇ ಐವನ್ ರಿಗೆ ಅನಾಯಾಸವಾಗಿ ವಿಧಾನಪರಿಷತ್ ಸದಸ್ಯತ್ವ, ವಿಧಾನಪರಿಷತ್ ಮುಖ್ಯ ಸಚೇತಕ ಸ್ಥಾನವೂ ದಕ್ಕಿದ್ದು, ಈ ಸಚಿವ ಸ್ಥಾನ ದೊರೆಯುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ಈ ಬಗ್ಗೆ ಐವನ್ ಡಿಸೋಜಾ ದೆಹಲಿಯ ಹೈಕಮಾಂಡ್ ಜೊತೆ ಹಾಗೂ ರಾಜ್ಯದ ಹಿರಿಯ ಕಾಂಗ್ರೇಸ್ ನಾಯಕರ ಜೊತೆ ನಿಕಟ ಸಂಪರ್ಕದಲ್ಲೂ ಇದ್ದಾರೆ ಎನ್ನುವ ಮಾಹಿತಿಗಳು ಬೆಳಕಿಗೆ ಬಂದಿದೆ.
ಗೋವಾ ವಿಧಾನಸಭಾ ಚುನಾವಣೆ, ರಾಜ್ಯದಲ್ಲಿ ನಡೆದ ಎರಡು ಉಪಚುನಾವಣೆಗಳಲ್ಲಿ ಕಾಂಗ್ರೇಸ್ ಗೆಲುವು ಹಾಗೂ ಅತ್ಯಧಿಕ ಸ್ಥಾನಗಳನ್ನು ಗಳಿಸುವಲ್ಲಿ ಐವನ್ ಡಿಸೋಜಾ ಪ್ರಮುಖ ಪಾತ್ರವಹಿಸಿದ್ದಾರೆ. ಅಲ್ಲದೆ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಮಂಗಳೂರು ದಕ್ಷಿಣ ಹಾಗೂ ಮುಲ್ಕಿ ಮೂಡಬಿದಿರೆ ಕ್ಷೇತ್ರಕ್ಕೆ ಕಣ್ಣಿಟ್ಟಿದ್ದು, ಒಂದು ವೇಳೆ ಸಚಿವ ಸ್ಥಾನ ಗಿಟ್ಟಿಸಿಕೊಂಡಲ್ಲಿ ಅವರ ಗೆಲುವಿಗೆ ಇದು ಸಹಕಾರಿಯಾಗಲಿದೆ. ಈ ನಡುವೆ ಹೈಕಮಾಂಡಿ ಗೂ ರಾಜಕೀಯವಾಗಿ ಕ್ರೀಯಾಶೀಲವಾದ ಐವನ್ ಡಿಸೋಜಾರಂತ ಮುಖಂಡರ ಬಗ್ಗೆ ಒಲವೂ ಹೆಚ್ಚಾಗಿದೆ.