DAKSHINA KANNADA
ಹೆದ್ದಾರಿಯಲ್ಲಿ ಅಪಾಯದ ಗಂಟೆ ಬಾರಿಸುತ್ತಿರುವ ರೋಡ್ ಕ್ರಾಸಿಂಗ್
ಮಂಗಳೂರು,ಅಗಸ್ಟ್ 25: ಮಹಾರಾಷ್ಟ್ರ, ಕರ್ನಾಟಕ ಹಾಗೂ ಕೇರಳ ರಾಜ್ಯವನ್ನು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 66 ರ ಮಂಗಳೂರು ಹೊರವಲಯದ ಆದಂಕುದ್ರು ಎಂಬಲ್ಲಿ ಇತ್ತೀಚೆಗೆ ನಿರ್ಮಾಣಗೊಂಡಿರುವ ಅನಧಿಕೃತ ರೋಡ್ ಕ್ರಾಸಿಂಗ್ ಅನಾಹುತಕ್ಕಾಗಿ ಬಾಯ್ತೆರೆದು ನಿಂತಿದೆ.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವ್ಯಾಪ್ತಿಗೆ ಬರುವ ಈ ರಸ್ತೆಗೆ ಆದಂಕುದ್ರು ಪ್ರದೇಶದಲ್ಲಿ ಒಂದು ಕಡೆಯಿಂದ ಇನ್ನೊಂದು ಕಡೆಗೆ ಸಂಪರ್ಕ ಕಲ್ಪಿಸುವ ಯಾವುದೇ ಅಧಿಕೃತ ಡಿವೈಟರ್ ಕಟ್ಟಿಂಗ್ ಇಲ್ಲದಿದ್ದರೂ, ಇಲ್ಲಿ ಅನಧಿಕೃತವಾಗಿ, ಹೆದ್ದಾರಿ ಪ್ರಾಧಿಕಾರದ ಗಮನಕ್ಕೂ ತರದೆ ಡಿವೈಡರ್ ಅನ್ನು ತೆರವುಗೊಳಿಸಿ ವಾಹನಗಳು ರಸ್ತೆದಾಟಲು ವ್ಯವಸ್ಥೆಯನ್ನು ಮಾಡಲಾಗಿದೆ. ಇದೇ ಪ್ರದೇಶದಿಂದ ಸುಮಾರು 600 ಮೀಟರ್ ದೂರದಲ್ಲಿರುವ ಕಲ್ಲಾಪು ಪ್ರದೇಶದಲ್ಲಿ ಈಗಾಗಲೇ ಹೆದ್ದಾರಿ ಪ್ರಾಧಿಕಾರವು ಅಧಿಕೃತವಾದ ರಸ್ತೆ ದಾಟಲು ವ್ಯವಸ್ಥೆಯನ್ನು ಮಾಡಿದ್ದರೂ, ಕಿಡಿಗೇಡಿಗಳು ಇಲ್ಲಿಯೂ ಡಿವೈಡರ್ ಅನ್ನು ತುಂಡು ಮಾಡುವ ಮೂಲಕ ರೋಡ್ ಕ್ರಾಸಿಂಗ್ ವ್ಯವಸ್ಥೆ ಮಾಡಿದ್ದಾರೆ.
ಇದರಿಂದಾಗಿ ಹೆದ್ದಾರಿಯಲ್ಲಿ ಸಂಚರಿಸುವ ವಾಹನಗಳಿಗೆ ತೊಂದರೆಯಾಗುತ್ತಿದೆಯಲ್ಲದೆ, ಅನಧಿಕೃತವಾಗಿ ನಿರ್ಮಾಣಗೊಂಡಿರುವ ರೋಡ್ ಕ್ರಾಸಿಂಗ್ ನ ಅರಿವಿಲ್ಲದೆ ಬರುವ ವಾಹನಗಳಿಗೆ ಈ ಕ್ರಾಸಿಂಗ್ ನಿಂದ ನುಗ್ಗುವ ವಾಹನಗಳಿಂದ ತೊಂದರೆ ಎದುರಾಗಿದೆ. ಕೇವಲ ದ್ವಿಚಕ್ರ ವಾಹನಗಳಲ್ಲಿದೆ, ನೇತ್ರಾವತಿ ನದಿಯಿಂದ ಮರಳು ಸಾಗಾಟ ಮಾಡುವ ಲಾರಿಗಳೂ ಇದೇ ಕ್ರಾಸಿಂಗ್ ಮೂಲಕ ಹೆದ್ದಾರಿಗೆ ನುಗ್ಗುತ್ತಿದ್ದು, ಹಲವು ವಾಹನಗಳು ಅಫಘಾತವಾಗುವ ಪರಿಸ್ಥಿತಿಯನ್ನು ಕ್ಷಣಾರ್ಧದಲ್ಲಿ ತಪ್ಪಿಸಿಕೊಂಡಿದೆ.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ನಿಯಮದ ಪ್ರಕಾರ 3 ಕಿಲೋಮೀಟರ್ ಒಂದರಂತೆ ರೋಡ್ ಕ್ರಾಸಿಂಗ್ ವ್ಯವಸ್ಥೆಯಿದ್ದರೂ, ಆದಂಕುದ್ರುವಿನಲ್ಲಿ ಮಾತ್ರ ಕೇವಲ 600 ಮೀಟರ್ ಅಂತರದಲ್ಲಿ ಅಧಿಕೃತ ರೋಡ್ ಕ್ರಾಸಿಂಗ್ ವ್ಯವಸ್ಥೆಯಿದ್ದರೂ, ಇನ್ನೊಂದು ಅನಧಿಕೃತ ಕ್ರಾಸಿಂಗ್ ನಿರ್ಮಿಸಲಾಗಿದೆ. ಹೆದ್ದಾರಿ ಪ್ರಾಧಿಕಾರ ಕೂಡಲೇ ಇತ್ತ ಗಮನಹರಿಸಿ ಈ ರೋಡ್ ಕ್ರಾಸಿಂಗ್ ವ್ಯವಸ್ಥೆಯನ್ನು ಮುಚ್ಚಬೇಕಾಗಿದೆ. ಇಲ್ಲದೇ ಹೋದಲ್ಲಿ ಮುಂದಿನ ದಿನಗಳಲ್ಲಿ ಈ ಪರಿಸರದಲ್ಲಿ ಭಾರೀ ಅನಾಹುತವಾಗುವ ಸಾಧ್ಯತೆಯೂ ಹೆಚ್ಚಾಗಿದೆ.
You must be logged in to post a comment Login