Connect with us

LATEST NEWS

ಮತ್ತೆ ಮ್ಯಾನ್ ಹೋಲ್ ಒಳಗೆ ಕಾರ್ಮಿಕ, ಮೇಯರ್ ಮೂಗಿನಡಿಯಲ್ಲೇ ಕಾನೂನಿನ ಕುಹಕ

ಮತ್ತೆ ಮ್ಯಾನ್ ಹೋಲ್ ಒಳಗೆ ಕಾರ್ಮಿಕ, ಮೇಯರ್ ಮೂಗಿನಡಿಯಲ್ಲೇ ಕಾನೂನಿನ ಕುಹಕ

ಮಂಗಳೂರು,ಅಕ್ಟೋಬರ್ 20: ಕಾರ್ಮಿಕರನ್ನು ಮ್ಯಾನ್ ಹೋಲ್ ಗೆ ಇಳಿಸಿ ಚರಂಡಿ ಸರಿಪಡಿಸುವುದು ಕಾನೂನುಬಾಹಿರವಾಗಿದ್ದರೂ, ಮಂಗಳೂರು ಮಹಾನಗರ ಪಾಲಿಕೆ ಮತ್ತೆ ಮತ್ತೆ ಈ ರೀತಿಯ ಅನಾಗರಿಕ ವರ್ತನೆಯನ್ನು ಪುನರಾವರ್ತಿಸಿದೆ. ಎರಡು ದಿನಗಳ ಹಿಂದೆಯಷ್ಟೇ ಮಂಗಳೂರಿನ ಬಂದರ್ ವಾರ್ಡ್ ನಲ್ಲಿ ಮ್ಯಾನ್ ಹೋಲ್ ಒಳಗೆ ಇಳಿದು ಚರಂಡಿ ನೀರನ್ನು ಮೇಲಕ್ಕೆತ್ತಿದ ಕಾರ್ಮಿಕರ ಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಆದರೆ ಇದೀಗ ಮತ್ತೆ ಮಹಾನಗರ ಪಾಲಿಕೆ ಇಂಥಹುದೇ ಕೆಲಸವನ್ನು ಕಾರ್ಮಿಕರಲ್ಲಿ ಮಾಡಿಸುವ ಮೂಲಕ ಉಡಾಫೆ ಹಾಗೂ ಉದ್ಧಟತನ ಮೆರೆದಿದೆ. ಪಾಲಿಕೆ ವ್ಯಾಪ್ತಿಯ ಡಾನ್ ಬಾಸ್ಕೋ ಹಾಲ್ ಮುಂಭಾಗದ ಮ್ಯಾನ್ ಹೋಲನ್ನು ಕಾರ್ಮಿಕರು ದುರಸ್ಥಿ ಮಾಡುತ್ತಿದ್ದು, ಸ್ಥಳೀಯ ಕಾರ್ಪೋರೇಟರ್ ಎಸಿ ವಿನಯ್ ರಾಜ್ ಗೆ ಸಂಬಂಧಪಟ್ಟ ವಾರ್ಡ್ ಇದಾಗಿದೆ. ನಾನಾ ರೋಗಗಳ ಮೂಲಸ್ಥಾನವಾಗಿರುವ ಚರಂಡಿಗೆ ಯಾವುದೇ ಮುಂಜಾಗೃತಾ ಕ್ರಮ ವಹಿಸದೆ ಕಾರ್ಮಿಕರನ್ನು ಇಲ್ಲಿ ಇಳಿಸಲಾಗುತ್ತಿದೆ.ಕೈಗೆ ಹಾಗೂ ಕಾಲಿಗೆ ಕನಿಷ್ಟಪಕ್ಷ ಗ್ಲೌಸ್ ಹಾಗೂ ಶೂ ವನ್ನೂ ನೀಡದೆ, ಖಾಲಿ ಕೈಗಳಲ್ಲೇ ಕಾರ್ಮಿಕರು ಬ್ಲಾಕ್ ಆಗಿರುವ ಚರಂಡಿಯ ಕಾಮಗಾರಿಯನ್ನು ನಡೆಸುತ್ತಿದ್ದಾರೆ. ಮಾತೆತ್ತಿದ್ದರೆ ಕಾನೂನಿಗೆ ವಿರುದ್ಧ ಯಾವುದೇ ಕೆಲಸಗಳು ಮಂಗಳೂರು ನಗರ ಪಾಲಿಕೆಯೊಳಗೆ ನಡೆಸಲು ಬಿಡುವುದಿಲ್ಲ ಎಂದು ತಿರುಗುವ ಮೇಯರ್ ಮೂಗಿನ ನೇರಕ್ಕೇ ಈ ರೀತಿ ಕಾನೂನನ್ನು ಗಾಳಿಗೆ ತೂರಲಾಗುತ್ತಿದೆ.

Facebook Comments

comments