ಫೇಸ್ ಬುಕ್ ಪರಿಚಯ ಮಂಗಳೂರು ವ್ಯಕ್ತಿಗೆ ಸಂಕಷ್ಟ ತಂದಿಟ್ಟಿದ್ದು ಲಂಡನ್ ಲೇಡಿಯ ಹೆಸರಿನಲ್ಲಿ ಲಕ್ಷಾಂತರ ರೂಪಾಯಿಗಳ ಪಂಗನಾಮ ಹಾಕಿಸಿಕೊಂಡಿದ್ದಾರೆ.

ಮಂಗಳೂರು: ಫೇಸ್ ಬುಕ್ ಪರಿಚಯ ಮಂಗಳೂರಿನ ವ್ಯಕ್ತಿಗೆ ಸಂಕಷ್ಟ ತಂದಿಟ್ಟಿದ್ದು ಲಂಡನ್ ಲೇಡಿಯ ಹೆಸರಿನಲ್ಲಿ ಲಕ್ಷಾಂತರ ರೂಪಾಯಿಗಳ ಪಂಗನಾಮ ಹಾಕಿಸಿಕೊಂಡಿದ್ದಾರೆ.

ಈ ಬಗ್ಗೆ ಹಣ ಕಳಕೊಂಡ ಸಂತ್ರಸ್ಥ ಮಂಗಳೂರಿನ ಕದ್ರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿಕೊಂಡಿದ್ದಾರೆ. 57 ವರ್ಷದ ದೂರುದಾರರಿಗೆ ಫೇಸ್ ಬುಕ್‌ನಲ್ಲಿ ಫೆಬ್ರವರಿ ತಿಂಗಳಲ್ಲಿ ಲಂಡನ್ ನ ಲಿಲ್ಲಿಯನ್ ಮೇರಿ ಜಾರ್ಜ್ ಎನ್ನುವ ಮಹಿಳೆಯ ಪರಿಚಯವಾಗಿದ್ದು, ಬಳಿಕ ಆಕೆಯೊಂದಿಗೆ ಚಾಟಿಂಗ್ ಮಾಡಿದ್ದಾರೆ. ನವೆಂಬರ್ ತಿಂಗಳಲ್ಲಿ ಹಣ ತೆಗೆದುಕೊಂಡು ಭಾರತಕ್ಕೆ ಬರುವುದಾಗಿ ಆಕೆ ತಿಳಿಸಿದ್ದಳು. ಅದರಂತೆ ನ.15ರಂದು ಸೊನಾಲಿ ಗುಪ್ತ ಎನ್ನುವ ಮಹಿಳೆ ಕರೆ ಮಾಡಿ ಲಂಡನ್ ಮಹಿಳೆ ಲಿಲ್ಲಿಯನ್ ಮೇರಿ ಜಾರ್ಜ್ ಮುಂಬಯಿ ವಿಮಾನ ನಿಲ್ದಾಣಕ್ಕೆ ಬಂದಿದ್ದಾರೆ. ಅವರು ಟ್ರಾವೆಲರ್ಸ್ ಚೆಕ್ 25,000 ಪೌಂಡ್ಸ್ ಮತ್ತು 1ಕೆ.ಜಿ. ಚಿನ್ನವನ್ನು ತಂದಿದ್ದು ಭಾರತದ ರೂಪಾಯಿಯಲ್ಲಿ ಪೌಂಡ್ಸ್ ಗೆ ಸುಮಾರು 30 ಲಕ್ಷ ರೂ. ಆಗುತ್ತದೆ ಎಂದು ತಿಳಿಸಿ, ಕರೆಯನ್ನು ಲಿಲ್ಲಿಯನ್ ಗೆ ಕೊಟ್ಟಿದ್ದಾಳೆ. ಲಿಲ್ಲಿಯನ್ ಮಾತನಾಡಿ ಆ ಹಣವನ್ನು ಭೇಟಿ ಮಾಡುವ ಸಮಯದಲ್ಲಿ ನೀಡುವುದಾಗಿ ಹೇಳಿ ನಂಬಿಸಿದ್ದಾಳೆ. ಪೌಂಡ್ಸ್ ಕುರಿತು ಎಕ್ಸ್‌ಚೆಂಜ್ ರಿಜಿಸ್ಟ್ರೇಷನ್, ಡಿಸೌಂಟ್ ಚಾರ್ಜಸ್, ಕಸ್ಟಮ್ಸ್ ಡಿಕ್ಲರೇಷನ್ ಫಾರ್ಮ್ ನಲ್ಲಿ ನಮೂದಿಸದೆ ಇರುವ ಬಗ್ಗೆ, ಮನಿ ಲ್ಯಾಂಡರಿಂಗ್ ಚಾರ್ಜ್ ಬಗ್ಗೆ ಇನ್ನಿತರ ಅನೇಕ ಕಾರಣಗಳನ್ನು ತಿಳಿಸಿ ಬೇರೆ ಬೇರೆ ಬ್ಯಾಂಕ್ ಖಾತೆಗಳ ವಿವರವನ್ನು ನೀಡಿ ಹಣ ಪಾವತಿಸಲು ಕರೆ ಮಾಡಿದ ಮಹಿಳೆ ತಿಳಿಸಿದ್ದಾಳೆ. ಅದರಂತೆ ನ.15ರಿಂದ 18ರ ವರೆಗೆ ಹಂತ ಹಂತವಾಗಿ ಒಟ್ಟು 13,38,900 ರೂ. ವರ್ಗಾಯಿಸಿದ್ದಾರೆ. ಬಳಿಕ ಹಣವನ್ನು ವಾಪಸ್ ನೀಡುವಂತೆ ಕೇಳಿದಾಗ ಎರಡು ದಿನದಲ್ಲಿ ನೀಡುವುದಾಗಿ ಲಿಲ್ಲಿಯನ್ ತಿಳಿಸಿದ್ದಾಳೆ. ಆದರೆ ಆ ಬಳಿಕ ಆಕೆಯಿಂದ ಯಾವುದೇ ಪ್ರತಿಕ್ರಿಯೆ ಬಾರದ ಹಿನ್ನೆಲೆಯಲ್ಲಿ ತಾನು ಮೋಸ ಹೋಗಿರುವುದು ತಿಳಿದು ಬಂದಿದೆ. ಅದರಂತೆ ಹಣ ಕಳಕೊಂಡ ಸಂತ್ರಸ್ಥ ನಗರದ ಕದ್ರಿ ಠಾಣೆಯಲ್ಲಿ ದೂರು ರಾಖಲಿಸಿಕೊಂಡಿದ್ದಾರೆ.

 

Share Information