DAKSHINA KANNADA
ಮಂಗಳೂರು ವಿ.ವಿ. ಪಠ್ಯ ಪುಸ್ತಕ ವಿವಾದ, ಸಮಿತಿ ವಿರುದ್ಧ ಕ್ರಮಕ್ಕೆ ರಾಜ್ಯಪಾಲರಿಗೆ ಮನವಿ…
ಮಂಗಳೂರು, ಅಗಸ್ಟ್ 11: ಮಂಗಳೂರು ವಿಶ್ವವಿದ್ಯಾನಿಲಯದ ಪ್ರಸಾರಂಗ ವಿಭಾಗ ಪ್ರಸಕ್ತ ಸಾಲಿನ ಪ್ರಥಮ ಬಿ.ಸಿ.ಎ ವಿದ್ಯಾರ್ಥಿಗಳಿಗಾಗಿ ನೀಡಲಾದ ಕನ್ನಡ ಪಠ್ಯಪುಸ್ತಕದಲ್ಲಿ ಸಾಹಿತಿ ಬರಗೂರು ರಾಮಚಂದ್ರಪ್ಪ ಬರೆದ ಲೇಖನವನ್ನು ಪ್ರಕಟಿಸಿರುವುದು ವಿವಾದಕ್ಕೆ ಕಾರಣವಾಗಿದೆ. ಲೇಖಕರು ಈ ಲೇಖನದಲ್ಲಿ ಸೈನಿಕರ ಬಗ್ಗೆ ಅವಹೇಳನಕಾರಿಯಾಗಿ ಬರೆದಿದ್ದಾರೆ ಎನ್ನುವ ಆರೋಪ ಇದೀಗ ಕೇಳಿಬರುತ್ತಿದೆ. ಪಠ್ಯ ಪುಸ್ತಕ ಸಮಿತಿ ಸದಸ್ಯರ ಮೇಲೆ ಕ್ರಮ ಜರುಗಿಸಬೇಕೆಂದು ಒತ್ತಾಯಿಸಿ ಇದೀಗ ಕರಾವಳಿ ಸಾಂಸ್ಕೃತಿಕ ಪರಿಷತ್ ಉಳ್ಳಾಲ, ದಕ್ಷಿಣಕನ್ನಡ ಜಿಲ್ಲಾಧಿಕಾರಿ ಮುಖಾಂತರ ರಾಜ್ಯಪಾಲರಿಗೆ ಮನವಿ ಸಲ್ಲಿಸಿದೆ.
ಪರಿಷತ್ ಅಧ್ಯಕ್ಷ ಸತೀಶ್ ಕುಂಪಲ ಮಾತನಾಡಿ ದೇಶ ಕಾಯುವ ವೀರರನ್ನು ಸ್ಮರಿಸುವುದು, ಗೌರವಿಸುವುದು ಭಾರತೀಯರಾದ ನಮ್ಮ ಧರ್ಮ. ಎಳವೆಯಿಂದಲೇ ಸೈನಿಕರ ಬಗ್ಗೆ ಅಭಿಮಾನ ಮೂಡುವಂತಹ ವಿಚಾರವನ್ನು ಮಕ್ಕಲಿಗೆ ನೀಡುವುದು ಸರಕಾರದ ಕರ್ತವ್ಯ. ಆದರೆ ಮಂಗಳೂರು ವಿ.ವಿ. ಪ್ರಕಟಿಸಿದ ಪುಸ್ತಕದಲ್ಲಿ ಸೈನಿಕರನ್ನು ಅತ್ಯಾಚಾರಿಗಳೆಂಬಂತೆ ಬಿಂಬಿಸಲಾಗಿದೆ. ಹಾಗೂ ಸೈನಿಕರನ್ನು ಅವಮಾನಿಸಲಾಗಿದೆ. ಇಂಥಹ ಪಠ್ಯವನ್ನು ವಿದ್ಯಾರ್ಥಿಗಳಿಗೆ ಭೋಧಿಸಿದರೆ ಆಗುವ ಪರಿಣಾಮವನ್ನು ಯೋಚಿಸದೆ, ಏನೋ ದುರುದ್ದೇಶವನ್ನಿಟ್ಟುಕೊಂಡು ಪಠ್ಯವನ್ನು ಮುದ್ರಿಸಿರುವುದು ದೇಶದ ಬಗ್ಗೆ ಕಾಳಜಿಯಿರುವ ಅಸಂಖ್ಯಾತ ದೇಶಪ್ರೇಮಿಗಳಿಗೆ ನೋವಾಗಿದೆ ಎಂದರು. ಅಲ್ಲದೆ ಪಠ್ಯ ಪುಸ್ತಕ ಸಮಿತಿಯ ಪ್ರತಿಯೊಬ್ಬ ಸದಸ್ಯನಿಗೆ ನೋಟೀಸ್ ಜಾರಿ ಮಾಡುವ ಮೂಲಕ ಅವರ ವಿವರಣೆ ಪಡೆಯಬೇಕು ಹಾಗೂ ಅರ್ಹರನ್ನು ಮಾತ್ರ ಸಮಿತಿಗೆ ನಿಯೋಜಿಸಬೇಕೆಂದು ಅವರು ರಾಜ್ಯಪಾಲರಿಗೆ ಮನವಿ ಮಾಡಿದ್ದಾರೆ.
You must be logged in to post a comment Login