ಭಕ್ತರಿಗೆ ಸಿಗದ ಕದ್ರಿ ಶ್ರೀ ಮಂಜುನಾಥ ಸ್ವಾಮಿಯ ಅನ್ನ ಪ್ರಸಾದ

ಮಂಗಳೂರು, ಫೆಬ್ರವರಿ 25 : 10ನೇ ಶತಮಾನದಲ್ಲಿ ಪಾಂಡವ ನಿರ್ಮಿತ ದೇವಾಲಯ ಎಂದೇ ಪ್ರಸಿದ್ಧಿ ಪಡೆದಿರುವ ಬುದ್ಧಿವಂತರ ಜಿಲ್ಲೆ ಎನಿಸಿರುವ ಪರಶುರಾಮನ ಸೃಷ್ಟಿ ಮಂಗಳೂರಿನ ಹೃದಯ ಭಾಗದಲ್ಲಿರುವ ಪ್ರಸಿದ್ಧ ದೇವಾಲಯ ಕದ್ರಿ ಶ್ರೀ ಮಂಜುನಾಥ ಸ್ವಾಮಿ ದೇವಸ್ಥಾನ.

ಹೌದು ಇದು ನಿಜವಾಗಿಯೂ ಪಾಂಡವ ನಿರ್ಮಿತ ದೇವಸ್ಥಾನವೇ. ಹಲವಾರು ಶತಮಾನಗಳಿಂದ ಭಕ್ತಾದಿಗಳಿಂದ ಪೂಜೆ ಪುನಸ್ಕಾರ ಹೋಮ ಹವನಾದಿಗಳನ್ನು ನಿತ್ಯ ಪಡೆಯುತ್ತಾ ಬಹಳ ಉತ್ತುಂಗದಲ್ಲಿ ರಾರಾಜಿಸುತ್ತಿದೆ. ಶ್ರೀ ಮಂಜುನಾಥ ಸ್ವಾಮಿಯನ್ನು ಕಾಣಲು ಜಿಲ್ಲೆ, ರಾಜ್ಯ, ದೇಶ, ವಿದೇಶಗಳಿಂದ ಭಕ್ತರು ಸಾಗರೋಪಾದಿಯಲ್ಲಿ ಹರಿದು ಬರುತ್ತಾರೆ. ದೇವಸ್ಥಾನವು ಶಿಲಾಮಯಗಳಿಂದ ನವೀಕರಣಗೊಳ್ಳುತ್ತಿದ್ದಂತೆ ಅಲ್ಲಿನ ಅಡಳಿತ ಸಮಿತಿಯ ಸದಸ್ಯರ ಮನಸ್ಸು ಕೂಡಾ ಒಂದು ಚೂರು ಮಾನವೀಯತೆ ಮನುಷ್ಯತ್ವ ಇಲ್ಲದೇ ಕಲ್ಲಿನಂತೆ ಕಠೋರವಾಗುತ್ತಿದೆ. ಎಲ್ಲಿಯವರೆಗೆ ಅಲ್ಲಿನ ಸಮಿತಿ ಸದಸ್ಯರು, ಕೆಲಸಗಾರರು ಮನುಷ್ಯತ್ವ ಹೀನರಾಗಿತ್ತಿದ್ದಾರೆ ಎಂದರೆ ಭಕ್ತಾದಿಗಳಿಂದ ಮಂಜುನಾಥ ಸ್ವಾಮಿಯ ಅನ್ನವನ್ನೂ ಕಿತ್ತುಕೊಳ್ಳುತ್ತಿದ್ದಾರೆ.
ಈ ಹಿಂದೆ ಶಾಲಾ- ಕಾಲೇಜ್ ವಿದ್ಯಾರ್ಥಿಗಳು ಅನ್ನಪ್ರಸಾದ ಸ್ವೀಕರಿಸುವುದಕ್ಕೆ ನಿರ್ಬಂಧ ಹೇರಿದ್ದರು. ಇದೀಗ ಸಾರ್ವಜನಿಕರ ಅನ್ನಕ್ಕೂ ಕಡಿವಾಣ ಹಾಕಿದ್ದಾರೆ. ಸಾಮಾನ್ಯವಾಗಿ ದೇವಾಲಯಗಳಲ್ಲಿ ಅಪರಾಹ್ನ 02:45ರ ವರೆಗೆ ಅನ್ನಪ್ರಸಾದ ಸ್ವೀಕರಣೆಗೆ ಅವಕಾಶವಿರುತ್ತದೆ. ಇನ್ನೂ ಕೆಲವು ದೇವಾಲಯಗಳಲ್ಲಿ 03:00ಯ ವರೆಗೂ ಅನ್ನಪ್ರಸಾದ ನೀಡಲಾಗುತ್ತದೆ. ಆದರೆ ಕಳೆದ ಸೋಮವಾರದಿಂದ ಅಂದರೆ ತಾ:- 18-02-2019 ರಿಂದ ಕದ್ರಿ ಮಂಜುನಾಥ ಸ್ವಾಮಿ ದೇವಾಲಯದಲ್ಲಿ ಅಪರಾಹ್ನ 02:00ಗೆ ಅನ್ನಪ್ರಸಾದಕ್ಕೆ ಪೂರ್ಣವಿರಾಮ ಹಾಕಿ ಅನ್ನಛತ್ರಕ್ಕೆ ಬೀಗ ಜಡಿಯುತ್ತಿದ್ದಾರೆ.
ಅದೆಷ್ಟೋ ಜನ ಒಂದು ಹೊತ್ತಿನ ಅನ್ನಕ್ಕಾಗಿ ಸಾಮರ್ಥ್ಯ ಇಲ್ಲದವರು, ಹೊರಗಡೆ ಕೆಲಸಕ್ಕೆ ಹೋಗುವವರು, ಕಾಲೇಜು ವಿದ್ಯಾರ್ಥಿಗಳು ಮಂಜುನಾಥ ಸ್ವಾಮಿಯನ್ನು ಅರಸಿ ಸ್ವಾಮಿಯ ಸನ್ನಿಧಾನಕ್ಕೆ ಬರುತ್ತಾರೆ. ಆದರೆ 02:00 ಗಂಟೆಗಿಂತ 1ನಿಮಿಷ ಹೆಚ್ಚಾದರೂ ದೇವರ ಅನ್ನಪ್ರಸಾದಕ್ಕಾಗಿ ಬಂದ ಭಕ್ತಾದಿಗಳನ್ನು ಹಿಂದಟ್ಟುತ್ತಿದ್ದಾರೆ. ಭಿಕ್ಷುಕರನ್ನೂ ಪ್ರೀತಿ, ಕರುಣೆಯಿಂದ ಕಾಣುವ ಸ್ವಚ್ಛಮನಸ್ಸಿನ ಸಹೃದಯಿಗಳು ನಾವು. ಆದರೆ ಅಲ್ಲಿನ ಸಮಿತಿ ಸದಸ್ಯರು ಭಕ್ತಾದಿಗಳನ್ನು ಭಿಕ್ಷುಕರಿಗಿಂತ ಕೀಳಾಗಿ ಕಾಣುತ್ತಿದ್ದಾರೆ.

“ಹೌದು ನಾವು ಭಿಕ್ಷುಕರೆ ಸರಿ ಅದು ಕದ್ರಿ ಮಂಜುನಾಥ ಸ್ವಾಮಿಯ ಪಾಲಿಗೆ ಆದರೆ ಮನುಷ್ಯತ್ವ ಹೀನ, ನಿಷ್ಕರುಣಾ, ನೀತಿಗೆಟ್ಟ ಅಲ್ಲಿನ ಸಮಿತಿಯವರ ಪಾಲಿಗೆ ಅಲ್ಲ”. ಇದಕ್ಕೆ ಸಾಕ್ಷಿ ಎಂಬಂತೆ ಕಳೆದ ವಾರ ಇಂತಹುದೇ ಪ್ರಸಂಗ ದೇವಾಲಯದಲ್ಲಿ ನಡೆದಿದೆ.

ತಾ :- 20-02-2019 ಬುಧವಾರದಂದು ವೃದ್ಧೆಯೋರ್ವರು ಸ್ವಾಮಿಯ ಅನ್ನಪ್ರಸಾದಕ್ಕಾಗಿ ಅಂಗಲಾಚಿ ಬಂದಿದ್ದರು. ಸಮಯ 02:04 ನಿಮಿಷ ಅಷ್ಟರಲ್ಲಾಗಲೇ ಅನ್ನಛತ್ರದ ಮುಂಭಾಗಿಲನ್ನು ಅಲ್ಲಿಯ ಬುದ್ಧಿಜೀವಿಗಳು ಬೀಗ ಜಡಿದು ಮುಚ್ಚಿಬಿಟ್ಟಿದ್ದರು.

ಯಾರೋ ಹೇಳಿದರೆಂದು ಆ ವೃದ್ಧೆಯು ಹಿಂಭಾಗಿಲಿನ ಕಡೆ ಹೆಜ್ಜೆ ಇಟ್ಟರು. ಅಲ್ಲಿಗೆ ತಲುಪಿದಾಗ ಹಿಂಬಾಗಿಲು ಕೂಡಾ ಭಾಗಶಃ ಮುಚ್ಚಿತ್ತು. ಆಗ ಸಮಯ 02ಗಂಟೆ 06ನಿಮಿಷ. ವೃದ್ಧೆಯ ಮುಖವು ಹಸಿವಿನಿಂದ ಬಾಡಿಹೋಗಿತ್ತು.

ಭಾಗಶಃ ಬಾಗಿಲು ಮುಚ್ಚಿತ್ತು ಅನ್ನಪ್ರಸಾದ ಸ್ವೀಕರಿಸಿದ ಭಕ್ತಾದಿಗಳು ಅದೇ ಭಾಗಶಃ ಮುಚ್ಚಿದ ಹಿಂಬಾಗಿಲಿನಿಂದ ಬಾಗಿಕೊಂಡು ಹೊರಬರುತ್ತಿದ್ದರು. ಇನ್ನೇನು ಬಾಗಿಕೊಂಡು ಒಳಗೆ ಹೋಗಬೇಕು ಅನ್ನುವಷ್ಟರಲ್ಲಿ ಪೂರ್ತಿ ಬಾಗಿಲು (shutter) ಮುಚ್ಚಿಯೇ ಬಿಟ್ಟರು. ಆ ವೃದ್ಧೆ ಪಾಪ ಹಸಿವಿನಿಂದ ಒಂದು ತುತ್ತು ಅನ್ನಕ್ಕಾಗಿ ಬಾಗಿಲು ತಟ್ಟಿದರೂ ಮತ್ತೆ ಆ ಬಾಗಿಲು ತೆರೆಯಲೇ ಇಲ್ಲ. ಆ ವೃದ್ಧೆ ದುಃಖಿಸುತ್ತಾ ಹಿನ್ನಡೆದರು.

ಕೇವಲ ಬಾಹ್ಯ ಆಡಂಬರ, ಥಳಕು ಬಳಕಿನ ಸೌಂದರ್ಯದಲ್ಲಿ ದೇವರನ್ನು ಕಾಣಲು ಸಾಧ್ಯವಿಲ್ಲ. ಹಸಿದವನಿಗೆ ಒಂದು ತುತ್ತು ನೀಡಿದರೆನೇ ಆ ದೇವರು ಒಲಿಯುತ್ತಾನೆ ಮತ್ತು ಆ ವ್ಯಕ್ತಿ ಪುಣ್ಯ ಕಟ್ಟಿಕೊಳ್ಳುತ್ತಾನೆ ಎಂಬುವುದನ್ನು ಇಲ್ಲಿನ ಆಡಳಿತ ಮಂಡಳಿ ಅಥವಾ ಮುಜರಾಯಿ ಇಲಾಖೆ ಮನಗಂಡು ನಡೆಯಬೇಕಾಗಿದೆ.

VIDEO

Facebook Comments

comments