Home KARNATAKA

ಪುತ್ತೂರು : ನಿಲ್ಲಿಸಿದ್ದ ಲಾರಿಗೆ ಕನ್ನ, 21.44 ಲಕ್ಷ ಮೌಲ್ಯದ ಕಾಫಿ ಬೀಜ ಚೀಲ ಹೊತ್ತೊಯ್ದ ಖದೀಮರು..!!

ಕೊಡಗಿನ ಪಿರಿಯಾಪಟ್ಟಣದಿಂದ ಮಂಗಳೂರು ಬಂದರಿಗೆ ಲಾರಿಯಲ್ಲಿ ಸಾಗಾಟ ಮಾಡುತ್ತಿದ್ದ  ಲಕ್ಷಾಂತರ ರೂಪಾಯಿ ಮೌಲ್ಯದ ಕಾಫಿ ಬೀಜಕ್ಕೆ ಕಳ್ಳರು ಕೈ ಹಾಕಿದ್ದಾರೆ. 
ಪುತ್ತೂರು: ಕೊಡಗಿನ ಪಿರಿಯಾಪಟ್ಟಣದಿಂದ ಮಂಗಳೂರು ಬಂದರಿಗೆ ಲಾರಿಯಲ್ಲಿ ಸಾಗಾಟ ಮಾಡುತ್ತಿದ್ದ  ಲಕ್ಷಾಂತರ ರೂಪಾಯಿ ಮೌಲ್ಯದ ಕಾಫಿ ಬೀಜಕ್ಕೆ ಕಳ್ಳರು ಕೈ ಹಾಕಿದ್ದಾರೆ. 
 ಪುತ್ತೂರು ಕಬಕ ಗ್ರಾಮದ ನೆಹರುನಗರ ಸಮೀಪ ಈ ಘಟನೆ ನಡೆದಿದ್ದು ಲಾರಿಯಿಂದ ಲಕ್ಷಾಂತರ ರೂಪಾಯಿ ಮೌಲ್ಯದ ಕಾಫಿ ಬೀಜಗಳು ತುಂಬಿದ್ದ ಗೋಣಿಗಳು ಖದೀಮರು ಕೊಂಡೊಯ್ದಿದ್ದಾರೆ.

ನೆಹರುನಗರ ಶೇವಿರೆ ನಿವಾಸಿ ತೃತೇಶ್ ಎಂಬವರು ಮಂಗಳೂರು ಪಣಂಬೂರಿನ ಭವಾನಿ ಶಿಪ್ಪಿಂಗ್ ಸರ್ವಿಸ್ ಏಜೆನ್ಸಿ ಮೂಲಕ ಪಿರಿಯಾಪಟ್ಟಣದಿಂದ ಮಂಗಳೂರಿನ ಬಂದರಿಗೆ ಕಾಫಿ ಬೀಜಗಳನ್ನು ಟ್ರಾನ್ಸ್‌ಪೋರ್ಟ್ ಮಾಡಲು ಬುಕ್ಕಿಂಗ್ ಪಡೆದುಕೊಂಡಿದ್ದರು.

ತನ್ನ ಲಾರಿಯಲ್ಲಿ ಪಿರಿಯಾಪಟ್ಟಣದ ಹೈರೇಂಜ್ ಕಾಫಿ ಕ್ಯೂರಿಂಗ್ ಹೌಸ್ ಕಂಪೆನಿಯಿಂದ ಡಿ.3ರಂದು 320 ಗೋಣಿ ಕಾಫಿ ಬೀಜಗಳನ್ನು ಲೋಡ್ ಮಾಡಿಕೊಂಡು ಮಂಗಳೂರು ಬಂದರಿಗೆ ಹೊರಟು ದಾರಿ ಮಧ್ಯೆ ರಾತ್ರಿ ನೆಹರುನಗರ ಬಳಿ ಲಾರಿಯನ್ನು ನಿಲ್ಲಿಸಿ ಮನೆಗೆ ಹೋಗಿದ್ದರು.  ಡಿ.4ರಂದು ಬೆಳಗ್ಗೆ ಮನೆಯಿಂದ ಬಂದು ಮಂಗಳೂರಿಗೆ ಟ್ರಕ್ ಚಲಾಯಿಸಿಬ ಹೋಗಿದ್ದರು.ಮಂಗಳೂರಿನ ಬಂದರಿನಲ್ಲಿ ಕಂಪೆನಿಯವರು ಕ್ವಾಲಿಟಿ ಚೆಕ್ ಮಾಡಿದಾಗ ಲಾರಿಯ ಹಿಂಬದಿಯ ಸೀಲ್ ಲಾಕ್ ತುಂಡಾಗಿರುವುದು ಕಂಡುಬಂದಿದೆ. ಸ್ಥಳಕ್ಕೆ ಬಂದ  ಕಂಪೆನಿಯ ಮೇಲ್ವಿಚಾರಕ ಲಾರಿಯ ಹಿಂಬದಿಯ ಬಾಗಿಲು ತೆರೆದು ನೋಡಿದಾಗ ಸ್ವಲ್ಪ ಭಾಗ ಗೋಣಿ ಚೀಲಗಳು ಕಾಣೆಯಾಗಿರುವುದು ಬೆಳಕಿಗೆ ಬಂದಿದೆ. ಬಳಿಕ ಪರಿಶೀಲಿಸಿ ನೋಡಿದಾಗ ಲಾರಿಯಲ್ಲಿದ್ದ 320 ಗೋಣಿ ಕಾಫಿ ಬೀಜಗಳ ಪೈಕಿ 80 ಗೋಣಿ ಕಾಫಿ ಬೀಜ ಕಳ್ಳರ ಪಾಲಾಗಿದೆ. ಕಳವಾಗಿರುವ ಕಾಫಿ ಬೀಜಗಳ ಅಂದಾಜು ಮೌಲ್ಯ ರೂ.21,44,೦೦೦ ಆಗಬಹುದು ಎಂದು ಅಂದಾಜಿಸಲಾಗಿದ್ದು.  ತೃತೇಶ್ ಅವರು ನೀಡಿದ ದೂರಿನಂತೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Facebook
Share Information