ವಾಷಿಂಗ್ಟನ್, ಮಾರ್ಚ್ 28: ಹಾರ್ಮುಜ್ ಜಲಸಂಧಿ ಮೂಲಕ ಹಾದುಹೋಗಲು ಪ್ರಯತ್ನಿಸುತ್ತಿದ್ದ ಚೀನೀ ಸರ್ಕಾರಿ ಸ್ವಾಮ್ಯದ ಎರಡು ಕಂಟೇನರ್ ಹಡಗುಗಳ ಸಂಚಾರಕ್ಕೆ ಇರಾನ್ ಅನುಮತಿ ನೀಡಲು ನಿರಾಕರಿಸಿದೆ.
ಈ ಹಡಗಿನಲ್ಲಿ ಏಷ್ಯಾದಿಂದ ಲೋಡ್ ಮಾಡಲಾಗಿದ್ದ ಸರಕುಗಳನ್ನು ಯುಎಇ, ಸೌದಿ ಅರೇಬಿಯಾ, ಬಹ್ರೇನ್, ಕತಾರ್, ಕುವೈತ್ ಮತ್ತು ಇರಾಕ್ಗೆ ಸಾಗಿಸಲಾಗುತ್ತಿತ್ತು.
ಈ ಎರಡು ಹಡಗುಗಳು ಜಲಸಂಧಿಯನ್ನು ದಾಟಲು ಪ್ರಯತ್ನಿಸಿದವು. ಆದರೆ ನಂತರ ಹಿಂತಿರುಗಿದ್ದು ಹಡಗು ಸಂಚಾರದ ರಿಯಲ್ ಟೈಂ ಡೇಟಾ ನೀಡುವ ಕೆಪ್ಲರ್ನಲ್ಲಿ ದಾಖಲಾಗಿದೆ.
ಈ ಮೊದಲು ತನ್ನ ಸ್ನೇಹಿತ ರಾಷ್ಟ್ರಗಳಾದ ಚೀನಾ, ಭಾರತ, ರಷ್ಯಾ, ಇರಾಕ್, ಪಾಕಿಸ್ತಾನದ ಹಡಗುಗಳ ಸಂಚಾರಕ್ಕೆ ಅನುಮತಿ ನೀಡಲಾಗುವುದು ಎಂದು ಇರಾನ್ ತಿಳಿಸಿತ್ತು. ಆದರೆ ಈಗ ಯಾವ ಕಾರಣಕ್ಕೆ ಈ ಹಡಗುಗಳ ಸಂಚಾರಕ್ಕೆ ಇರಾನ್ ಅನುಮತಿ ನೀಡಿಲ್ಲ ಎನ್ನುವುದು ತಿಳಿದು ಬಂದಿಲ್ಲ.
ತನ್ನ ದೇಶಕ್ಕೆ ಬೇರೆ ದೇಶಗಳಿಂದ ಬರುವ ಗೃಹೋಪಯೋಗಿ ವಸ್ತುಗಳು, ಕಾರುಗಳು, ಬಟ್ಟೆ ಮತ್ತು ಔಷಧಗಳನ್ನು ಸಾಗಿಸುವ ಹಡಗುಗಳು ಮಾತ್ರ ಅನುಮತಿ ನೀಡುತ್ತಿದೆ ಎಂದು ವರದಿಯಾಗಿದೆ. ಒಂದು ವೇಳೆ ಈ ಸುದ್ದಿ ನಿಜವಾದರೆ ಮಧ್ಯಪ್ರಾಚ್ಯದಲ್ಲಿರುವ ಗಲ್ಫ್ ದೇಶಗಳಿಗೆ ಆಹಾರ ಇತ್ಯಾದಿ ವಸ್ತುಗಳಿಗೆ ಭಾರೀ ಸಮಸ್ಯೆಯಾಗಲಿದೆ.