ಮಂಗಳೂರು, ಆಗಸ್ಟ್ 24 : ನಾಡಿನಾದ್ಯಂತ ಗಣೇಶ ಚತುರ್ಥಿ ಆಚರಣೆಗೆ ಕೇವಲ ಒಂದೇ ದಿನ ಬಾಕಿ ಇದೆ. ಕರಾವಳಿಯ ಮಾರುಕಟ್ಟೆಗಳಲ್ಲಿ ಈಗಾಗಲೇ ಹಬ್ಬಕ್ಕೆ ಖರೀದಿ ಭರದಿಂದ ನಡೆದಿದೆ.

ದೂರದ ಮಂಡ್ಯ, ಮೈಸೂರು ಭಾಗದಿಂದ ಲೋಡುಗಟ್ಟಲೆ ಕಬ್ಬು ಕರಾವಳಿಗೆ ಆಗಮಿಸಿದೆ. ಹಾಗೂ ಸ್ಥಳೀಯ ಕಬ್ಬು ಬೆಳೆಗಾರರು ಕೂಡ ಚೌತಿ ಹಬ್ಬಕ್ಕಾಗಿಯೇ ಬೆಳೆದ ತಮ್ಮ ಕಬ್ಬನ್ನು ಕಟಾವು ಮಾಡಿ ಮಾರುಕಟ್ಟೆಗೆ ತರುತ್ತಿದ್ದಾರೆ.

ಮಂಗಳೂರಿನಲ್ಲಿ  ಸ್ಥಳ ಕೊರತೆಯ ಹಿನ್ನೆಲೆಯಲ್ಲಿ ಹೂವಿನ ವ್ಯಾಪಾರಿಗಳು ಕಳೆದ ಎರಡು ದಿನಗಳಿಂದ ಹಿಂದಯೇ ಆಗಮಿಸಿ ಅಲ್ಲಲ್ಲಿ  ಬೀಡು ಬಿಟ್ಟಿದ್ದು ವ್ಯಾಪಾರ ಆರಂಭಿಸಿದ್ದಾರೆ. ಅಲ್ಲಲ್ಲಿ ಮೂಡೆ ವ್ಯಾಪಾರವೂ ಕಂಡು ಬರ್ತಾ ಇದೆ. ಸಾಮಾನ್ಯವಾಗಿ  50 ರೂಪಾಯಿಗಳ ದರ ಇದ್ದ ಕಬ್ಬು ದರ ಇದೀಗ ಗಗನಕ್ಕೇರಿದ ಎಪ್ಪತ್ತು ಎಪ್ಪತ್ತೈದು ಕೆಲವೆಡೆ ನೂರು ರೂಪಾಯಿ ತಲುಪಿದೆ.

ಸ್ಥಳೀಯ ಕಬ್ಬು ಸುಮಾರು ನೂರೈವತ್ತು ರೂಪಾಯಿ ತನಕ ದರದಲ್ಲಿ ಮಾರಾಟವಾಗುತ್ತಿದೆ.ತರಕಾರಿ ರೇಟು ಗಗನಕ್ಕೇರಿದ್ದೂ, ಬಯಲು ಸೀಮೆಯ ಬೆಂಡೆ ಕೆಜಿಗೆ 60 ರೂಪಾಯಿ ಇದ್ದರೆ ಸ್ಥಳೀಯ ಉದ್ದ ಬೆಂಡೆ ಕೆಜಿಗೆ 200 ರೂಪಾಯಿಯಲ್ಲಿ ಮಾರಾಟವಾಗುತ್ತಿದೆ. ಬಾಳೆ ಹಣ್ಣಿನ ದರವು ಗಗನಕ್ಕೇರಿದ್ದು ನೂರರ ಗಡಿ ದಾಟಿದೆ.

ಮಂಗಳೂರಿನ ಕೇಂದ್ರ ಮಾರುಕಟ್ಟೆಯಲ್ಲಿ ದೊಡ್ಡ ಮಟ್ಟದ ವ್ಯವಹಾರ ಇನ್ನೂ ಆರಂಭವಾದ ಹಾಗಿಲ್ಲ. ಇಂದು ಸಂಜೆಯಿಂದ ವೇಗ ಪಡೆದುಕೊಳ್ಳಬಹುದು. ಕರಾವಳಿಯಲ್ಲಿ ಗೌರಿ ಗಣೇಶನ ಹಬ್ಬವನ್ನು ದೊಡ್ಡ ಮಟ್ಟದಲ್ಲಿ ಆಚರಿಸುವುದು ಈ ಬಾರಿ ಕಡಿಮೆ ಅಂಥನೇ ಹೇಳಬಹುದು. ಯಾಕೆಂದರೆ ಒಂದು ಒಂದು ಕಡೆ ಡಿಮಾನಿಟೈಸೇಷನ್ ಹಾಗೂ ಮತ್ತೊಂದೆಡೆ ಜಿಎಸ್ ಟಿ ಈ ಎರಡೂ ಗ್ರಾಹಕರ ಮೇಲೆ ಸಾಕಷ್ಟು ಪರಿಣಾಮ ಬೀರಿದ ಹಿನ್ನೆಲೆಯಲ್ಲಿ ದೊಡ್ಡ ಮಟ್ಟದಲ್ಲಿ ಗಣೇಶ ಚತುರ್ಥಿಯನ್ನು ಆಚರಿಸುತ್ತಿರುವುದು ಕರಾವಳಿ ಯಲ್ಲಿ  ಅಷ್ಟಾಗಿ ಕಂಡುಬರುತ್ತಿಲ್ಲ.

ನೆರೆಯ ಕಾಸರಗೋಡಿನಲ್ಲೂ ಗಣೇಶನ ಹಬ್ಬ ಜೋರಾಗಿಯೇ ಇದೆ. ಅಲ್ಲಿ ಗಣೇಶ ವಿಗ್ರಹ ತಯಾರಿಕೆ ಮಾಡುವವರು ವಿರಳವಾದ್ದರಿಂದ ಮಂಗಳೂರಿನಿಂದ  ಭಾರಿ ಪ್ರಮಾಣದಲ್ಲಿ ಗಣೇಶ ಮೂರ್ತಿಗಳನ್ನು ಕೊಂಡುಹೋಗಲಾಗುತ್ತಿದೆ.