ಮುಂಬೈನ ದೇವಸ್ಥಾನವೊಂದರಲ್ಲಿ ಹಿಂದೂ ದೇವತೆ ಕಾಳಿ ಮಾತೆಯ ವಿಗ್ರಹಕ್ಕೆ ಮೇರಿ ಮಾತೆಯ ವೇಷ ಭೂಷಣವನ್ನು ತೊಟ್ಟ ಘಟನೆ ವರದಿಯಾಗಿದ್ದು ಈ ಸಂಬಂಧ ದೇವಸ್ಥಾನದ ಅರ್ಚಕನನ್ನು ಪೊಲೀಸರು ಬಂಧಿಸಿದ್ದಾರೆ.
ಮುಂಬೈ: ಮುಂಬೈನ ದೇವಸ್ಥಾನವೊಂದರಲ್ಲಿ ಹಿಂದೂ ದೇವತೆ ಕಾಳಿ ಮಾತೆಯ ವಿಗ್ರಹಕ್ಕೆ ಮೇರಿ ಮಾತೆಯ ವೇಷ ಭೂಷಣವನ್ನು ತೊಟ್ಟ ಘಟನೆ ವರದಿಯಾಗಿದ್ದು ಈ ಸಂಬಂಧ ದೇವಸ್ಥಾನದ ಅರ್ಚಕನನ್ನು ಪೊಲೀಸರು ಬಂಧಿಸಿದ್ದಾರೆ.

ಮುಂಬೈ ಉಪನಗರ ಚೆಂಬೂರಿನ ದೇವಸ್ಥಾನದಲ್ಲಿ ಈ ವಿದ್ಯಮಾನ ನಡೆದಿದೆ. ಕಾಳಿ ಮಾತೆಯ ವಿಗ್ರಹಕ್ಕೆ ಮದರ್ ಮೇರಿ ವೇಷ ತೊಡಿಸಿದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ. ದೇವಸ್ಥಾನಕ್ಕೆ ಭೇಟಿ ನೀಡಿದ ಭಕ್ತರು, ಕಾಳಿ ದೇವಿಯ ವಿಗ್ರಹವು ಜೀಸಸ್ ಕ್ರೈಸ್ಟ್‌ನ ತಾಯಿಯ ವೇಷಭೂಷಣಕ್ಕೆ ಹೋಲುವ ಉಡುಪಿನಲ್ಲಿ ಇರುವುದನ್ನು ಕಂಡು ಆಶ್ಚರ್ಯಚಕಿತರಾಗಿದ್ದಾರೆ. ಈ ಬಗ್ಗೆ ಆಕ್ರೋಶಗೊಂಡ ಭಕ್ತರು ಪ್ರಶ್ನಿಸಿದಾಗ, ರಮೇಶ್ ಎಂದು ಗುರುತಿಸಲಾದ ದೇವಾಲಯದ ಅರ್ಚಕನು, ಹಿಂದೂ ದೇವಿಯು ತನ್ನ ಕನಸಿನಲ್ಲಿ ಬಂದು, “ಅವಳಿಗೆ ಮದರ್ ಮೇರಿ ರೂಪದಲ್ಲಿ ವೇಷ ತೊಡಿಸು” ಎಂದು ಸೂಚಿಸಿದ್ದಾಗಿ ಹೇಳಿಕೊಂಡಿದ್ದಾನೆ.

ಕೋಡಲೇ ಅವರು ಸ್ಥಳೀಯ ಪೊಲೀಸರನ್ನು ಸಂಪರ್ಕಿಸಿ ದೇವಿಯ ವೇಷಭೂಷಣದಲ್ಲಿನ ಬದಲಾವಣೆಯ ಬಗ್ಗೆ ಮಾಹಿತಿ ನೀಡಿದರು.
ಒಂದು ಸಮುದಾಯದ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪದ ಮೇಲೆ ಅರ್ಚಕನ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ನಂತರ ಅರ್ಚಕನನ್ನು ಬಂಧಿಸಿ ಸ್ಥಳೀಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ಆತನನ್ನು ಎರಡು ದಿನಗಳ ಪೊಲೀಸ್ ವಶಕ್ಕೆ ನೀಡಿದೆ.



