Connect with us

    DAKSHINA KANNADA

    ಈಶಾನ್ಯ ಭಾರತದಲ್ಲಿ ಆರ್.ಎಸ್.ಎಸ್ ಪ್ರಚಾರಕ್ ಸಂಘಟನಾ ಕಾರ್ಯ ನಡೆಸುತ್ತಿಲ್ಲ- ನಾಗಾಲ್ಯಾಂಡ್ ರಾಜ್ಯಪಾಲ ಪಿ.ಬಿ.ಆಚಾರ್ಯ

     

    ಈಶಾನ್ಯ ಭಾರತದಲ್ಲಿ ಆರ್.ಎಸ್.ಎಸ್ ಪ್ರಚಾರಕ್ ಸಂಘಟನಾ ಕಾರ್ಯ ನಡೆಸುತ್ತಿಲ್ಲ- ನಾಗಾಲ್ಯಾಂಡ್ ರಾಜ್ಯಪಾಲ ಪಿ.ಬಿ.ಆಚಾರ್ಯ

    ಪುತ್ತೂರು,ಜನವರಿ 12:ಈಶಾನ್ಯ ರಾಜ್ಯಗಳಲ್ಲಿ ಕ್ರೈಸ್ತ ಧರ್ಮಕ್ಕೆ ಮತಾಂತರವಾಗುತ್ತಿರುವ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ಹೇಳುತ್ತಿರುವ ಸಂಘ ಪರಿವಾರದ ಯಾವೊಬ್ಬ ಪ್ರಚಾರಕನೂ ಈ ರಾಜ್ಯಗಳ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಕಾರ್ಯ ನಡೆಸಿಲ್ಲ.

    ಈ ಕೊರಗು ತನ್ನನ್ನು ಕಾಡುತ್ತಿದೆ ಎಂದು ನಾಗಾಲ್ಯಾಂಡ್ ರಾಜ್ಯಪಾಲ ಡಾ.ಪಿ.ಬಿ.ಆಚಾರ್ಯ ಆರ್.ಎಸ್.ಎಸ್ ಮುಖಂಡರ ಸಮ್ಮುಖದಲ್ಲಿ ಬೇಸರ ವ್ಯಕ್ತಪಡಿಸಿದರು.

    ಪುತ್ತೂರಿನ ವಿವೇಕಾನಂದ ಕಾಲೇಜಿನಲ್ಲಿ ನಡೆದ ಗ್ರಾಮ ವಿಕಾಸ ಸಮಾವೇಶ, ವಿವೇಕಾನಂದ ಜಯಂತಿ ಹಾಗೂ ಪ್ರಧಾನಮಂತ್ರಿ ಉಚಿತ ತಾಂತ್ರಿಕ ಕೌಶಲ್ಯವೃದ್ಧಿ ತರಬೇತಿ ಯೋಜನೆ ಸೇರಿದಂತೆ ವಿವಿಧ ಕಾರ್ಯಕ್ರಮಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.

    ಕಳೆದ 70 ವರ್ಷಗಳಿಂದ ಈಶಾನ್ಯ ಭಾರತದ ಜನ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.

    ಅಧಿಕಾರದಲ್ಲಿರುವವರ ನಿರ್ಲಕ್ಷ ಹಾಗೂ ಉದಾಸೀನತೆ ಅವರ ಸಮಸ್ಯೆಗಳನ್ನು ಇನ್ನಷ್ಟು ಉಲ್ಪಣಕ್ಕೆ ಕೊಂಡೊಯ್ದ ಕಾರಣವೇ ಇಂದು ನಾಗಾಲ್ಯಾಂಡ್ ನಲ್ಲಿ ವಿಭಜನೆಯ ಕೂಗು ಸೇರಿದಂತೆ ಹಲವು ದುಷ್ಕೃತ್ಯಗಳು ನಡೆಯುತ್ತಿದೆ.

    ಪ್ರಧಾನಿ ನರೇಂದ್ರ ಮೋದಿ ಈಗಾಗಲೇ ನಾಗಾಲ್ಯಾಂಡ್ ಸಮಸ್ಯೆಗಳ ಬಗ್ಗೆ ಅಲ್ಲಿನ ನಾಯಕರೊಂದಿಗೆ ಸಂಧಾನ ಪ್ರಕ್ರಿಯೆ ನಡೆಸುವ ಮೂಲಕ ಸಮಸ್ಯೆಯನ್ನು ಬಗೆಹರಿಸುವ ಪ್ರಯತ್ನಗಳನ್ನು ಮುಂದುವರಿಸಿದ್ದಾರೆ ಎಂದ ಅವರು ನ್ಯಾಗಾಲ್ಯಾಂಡ್ ಸೇರಿದಂತೆ ಈಶಾನ್ಯ ಭಾರತದ ಏಳು ರಾಜ್ಯಗಳಲ್ಲೂ ಮತಾಂತರಗಳು ನಡೆಯುತ್ತಿದೆ.

    ಮುಖ್ಯವಾಗಿ ಕ್ರೈಸ್ತ ಮಿಷನರಿಗಳು ಈ ಪ್ರಕ್ರಿಯೆಯಲ್ಲಿ ತೊಡಗಿಕೊಂಡಿವೆ. ಅಲ್ಲಿನ ಜನರಿಗೆ ಶಿಕ್ಷಣಕ್ಕಾಗಿ 2 ಕ್ರೈಸ್ತ ವಿಶ್ವವಿದ್ಯಾನಿಲಯಗಳು ಆರಂಭಗೊಂಡಿದೆ.

    ಆದರೆ ಮತಾಂತರವಾಗುತ್ತಿದೆ ಎಂದು ಆರೋಪಿಸುವ ಆರ್.ಎಸ್.ಎಸ್ ಅಥವಾ ಇನ್ಯಾವುದೇ ಹಿಂದೂ ಸಂಘಟನೆಗಳು ಅಲ್ಲಿನ ಜನತೆಯನ್ನು ಸಂಘಟಿಸುವ ಪ್ರಯತ್ನವನ್ನು ನಡೆಸಿಲ್ಲ ಎಂದು ಅವರು ಹೇಳಿದರು.


    ಸಂಘ ಶಿಕ್ಷಣದ ಪ್ರಕಾರ ಎಲ್ಲರನ್ನೂ ಒಟ್ಟಿಗೆ ಕೊಂಡೊಯ್ಯುವ ಕಾರ್ಯ ನಡೆಯಬೇಕಿದೆ. ಆದರೆ ನಾಗಾಲ್ಯಾಂಡ್ ನಲ್ಲಿ ಇದು ಆಗುತ್ತಿಲ್ಲ.

    ನಾಗಾಲ್ಯಾಂಡ್ ಜನರಿಗೆ ಉತ್ತಮ ಶಿಕ್ಷಣ, ಆರೋಗ್ಯ ನೀಡುವ ನಿಟ್ಟಿನಲ್ಲಿ ಅಲ್ಲಿ ಶಿಕ್ಷಣ ಸಂಸ್ಥೆಗಳನ್ನು , ಆಸ್ಪತ್ರೆಗಳನ್ನು ತೆರೆಯುವಂತೆ ಮನವಿ ಮಾಡಿದರೂ ಯಾವುದೇ ಪ್ರಯೋಜನಗಳೂ ಆಗಿಲ್ಲ ಎನ್ನುವ ನೋವು ತನ್ನದಾಗಿದೆ.

    ಅಭಿವೃದ್ಧಿ ಹೊಂದಿದ ಪ್ರದೇಶಗಳಿಗೆ ಮಾತ್ರ ಪ್ರಾಮುಖ್ಯತೆ ಕೊಡುವುದರಿಂದ ಯಾವುದೇ ಪ್ರಯೋಜನವಿಲ್ಲ. ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಚಾರಕರು ಆ ಭಾಗಗಳಿಗೆ ಬರುತ್ತಲೇ ಇಲ್ಲ ಎಂದು ಅವರು ಇದೇ ಸಂದರ್ಭದಲ್ಲಿ ಹೇಳಿದರು.

    ಸಮಾರಂಭದಲ್ಲಿ ಮಂಗಳೂರು ಸಂಸದ ನಳಿನ್ ಕುಮಾರ್ ಕಟೀಲ್, ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಹಾಗೂ ಆರ್.ಎಸ್.ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಮೊದಲಾದವರು ಉಪಸ್ಥಿತರಿದ್ದರು.

    Share Information
    Advertisement
    Click to comment

    You must be logged in to post a comment Login

    Leave a Reply