ಮಂಗಳೂರು, ಜುಲೈ 18: ಆರ್.ಎಸ್.ಎಸ್ ಕಾರ್ಯಕರ್ತ ಶರತ್ ಮಡಿವಾಳ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೋಲೀಸರ ತನಿಖೆ ಚುರುಕುಗೊಂಡಿದೆ.ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೋಲೀಸರಿಗೆ ಮಹತ್ವದ ಸುಳಿವು ಲಭ್ಯವಾಗಿದ್ದು, ಮಂಗಳೂರು ಹೊರವಲಯದ ಜೊಕಟ್ಟೆಯಲ್ಲಿ ಮಂಗಳೂರು ಸಿ.ಸಿ.ಬಿ ಪೋಲೀಸರು ದಾಳಿ ನಡೆಸಿದ್ದಾರೆ ಎನ್ನಲಾಗುತ್ತಿದ್ದು, ಪ್ರಕರಣ ಪ್ರಮುಖ ಆರೋಪಿಗಳನ್ನು ಬಂಧಿಸಿದ್ದಾರೆ ಎನ್ನುವ ಮಾಹಿತಿ ಮೂಲಗಳಿಂದ ಲಭ್ಯವಾಗಿದೆ.ಹತ್ಯೆಯ ಪ್ರಮುಖ ಆರೋಪಿಗಳು ಸುರತ್ಕಲ್ ನ ಜೊಕಟ್ಟೆಯ ಮನೆಯೊಂದರಲ್ಲಿ ಅಡಗಿದ್ದಾರೆ ಎನ್ನುವ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಸಿ.ಸಿ.ಬಿ ಪೋಲೀಸರು ಇಬ್ಬರನ್ನು ವಶಕ್ಕೆ ಪಡೆದಿದ್ದು, ಒರ್ವ ಪರಾರಿಯಾಗಿದ್ದಾನೆ ಎಂದು ತಿಳಿದು ಬಂದಿದೆ. ಶರತ್ ಮಡಿವಾಳ ಹತ್ಯೆಗೆ ಸಂಬಂಧಿಸಿದಂತೆ ಆರೋಪಿಗಳ ವಿಚಾರಣೆ ಗುಪ್ತ ಸ್ಥಳದಲ್ಲಿ ಆರಂಭಗೊಂಡಿದ್ದು, ಇನ್ನಷ್ಟು ಆರೋಪಿಗಳ ಬಂಧನವಾಗುವ ಸಾಧ್ಯತೆಯಿದೆ. ಜುಲೈ 4 ರಂದು ಶರತ್ ಬಿ.ಸಿ.ರೋಡ್ ನಲ್ಲಿರುವ ತನ್ನ ಲಾಂಡ್ರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ಬೈಕಿನಲ್ಲಿ ಬಂದ ಮೂವರ ತಂಡ ಈ ಕೃತ್ಯ ನಡೆಸಿ ಪರಾರಿಯಾಗಿತ್ತು. ಗಂಭೀರವಾಗಿ ಗಾಯಗೊಂಡಿದ್ದ ಶರತ್ ಅವರನ್ನು ಮಂಗಳೂರಿನ ಎ.ಜೆ. ಆಸ್ಪತ್ರೆಗೆ ದಾಖಲಿಸಲಾಗಿದ್ದು, ಜುಲೈ 7 ರಂದು ಶರತ್ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದರು. ಈ ಹಿನ್ನಲೆಯಲ್ಲಿ ಜುಲೈ 8 ರಂದು ಶರತ್ ಶವದ ಮೆರವಣಿಗೆ ನಡೆದ ಸಂದರ್ಭದಲ್ಲಿ ಕೂಡಾ ಕಿಡಿಗೇಡಿಗಳು ಶವಯಾತ್ರೆಗೆ ಕಲ್ಲು ತೂರಾಟ ನಡೆಸಿದ್ದರಿಂದ ದಕ್ಷಿಣಕನ್ನಡ ಜಿಲ್ಲೆಯೆಲ್ಲೆಡೆ ಅಹಿತಕರ ಘಟನೆಗಳೂ ನಡೆದಿತ್ತು. ಜಿಲ್ಲೆಯ ಬಂಟ್ವಾಳ, ಪುತ್ತೂರು,ಸುಳ್ಯ ಹಾಗೂ ಬೆಳ್ತಂಗಡಿ ತಾಲೂಕಿನಲ್ಲಿ ಸತತ 54 ದಿನಕ್ಕೆ ಸೆಕ್ಷನ್ 144 ನಿಷೇಧಾಜ್ಞೆ ಜಾರಿಯಲ್ಲಿದ್ದು, ಜುಲೈ 21 ರವರೆಗೂ ಮುಂದುವರಿಯಲಿದೆ.

0 Shares

Facebook Comments

comments