ಮಕ್ಕಳ ಸಾಹಿತಿ ಪಳಕಳ ಸೀತಾರಾಮ ಭಟ್ ಇನ್ನಿಲ್ಲ

ಮಂಗಳೂರು, ಸೆಪ್ಟೆಂಬರ್ 26 : ಕನ್ನಡ ಸಾಹಿತ್ಯ ಅಕಾಡಮಿ ಪುರಸ್ಕೃತ, ‘ಮಕ್ಕಳ ಸಾಹಿತಿ’ ಎಂಬ ಖ್ಯಾತಿಯ ಪಳಕಳ ಸೀತಾರಾಮ ಭಟ್ (86) ಅಲ್ಪಕಾಲದ ಅನಾರೋಗ್ಯದಿಂದ ಪುತ್ತಿಗೆ ಪಳಕಳದ ಸ್ವಗೃಹದಲ್ಲಿ ಸೋಮವಾರ ಸಂಜೆ ನಿಧನರಾದ್ದಾರೆ.

‘ಮಕ್ಕಳ ಸಾಹಿತಿ’ ಪಳಕಳ‌ ಸೀತಾರಾಮ ಭಟ್ ಅವರು ನಾಡಿನ ಅನೇಕ ದೈನಿಕಗಳೂ ಸೇರಿದಂತೆ ಅನೇಕ ನಿಯತಕಾಲಿಕೆಗಳಲ್ಲಿ ಅವರ ಚುಟುಕುಗಳು, ಬರೆಹಗಳು ಮಕ್ಕಳ ಅಂಕಣದಲ್ಲಿ ಪ್ರಕಟವಾಗಿ ಗಮನ ಸೆಳೆದಿವೆ.

ಕಿನ್ನಿಗೋಳಿಯ ‘ಯುಗಪುರುಷ’ ಮೂಲಕ ಅವರ ನೂರಕ್ಕೂ ಅಧಿಕ ಕೃತಿಗಳು ಪ್ರಕಟಗೊಂಡಿರುವುದು ಅಪರೂಪದ ದಾಖಲೆ ಎಂದೇ ಹೇಳಲಾಗುತ್ತದೆ.

ಪಳಕಳ ಸೀತಾರಾಮ ಭಟ್ಟರು ‘ಶಿಶು ಸಾಹಿತ್ಯಮಾಲೆ’ ಸ್ಥಾಪಿಸಿ, ತನ್ಮೂಲಕ ಹಲವಾರು ಮಕ್ಕಳ ಪುಸ್ತಕಗಳನ್ನು ಹೊರತಂದಿದ್ದಾರೆ

ತಮ್ಮ ಇಳಿವಯಸ್ಸಿನಲ್ಲೂ ನಿರಂತರ ಎಂಬಂತೆ ‘ಯುಗಪುರುಷ’ ಪತ್ರಿಕೆಗೆ ಚುಟುಕುಗಳನ್ನು ನೀಡಿ ಅಂಕಣಕಾರರಾಗಿಯೂ ಅವರು ಮಕ್ಕಳ ಮನೋವಿಜ್ಞಾನಿಯಾಗಿ ಗಮನಸೆಳೆದಿದ್ದರು.

ಯುಗಪುರುಷದ ವತಿಯಿಂದ ಪಳಕಳರನ್ನು ಸನ್ಮಾನಿಸಿದ ಕ್ಷಣ

1980ರಲ್ಲಿ ರಾಜ್ಯ ಸರ್ಕಾರದ ಪಠ್ಯಪುಸ್ತಕ ರಚನಾ ಸಮಿತಿ ಸದಸ್ಯರಾಗಿದ್ದ ಅವರು, ನಂತರ ಅನೇಕ ರಾಜ್ಯ ಮಟ್ಟದ ಮಕ್ಕಳ ಸಾಹಿತ್ಯ ಕವಿಗೋಷ್ಠಿಗಳಲ್ಲಿ ಸಕ್ರಿಯರಾಗಿ 1996ರ ಹಾಸನ ಸಮ್ಮೇಳನದಲ್ಲಿ ಮಕ್ಕಳ ಸಾಹಿತ್ಯ ಗೋಷ್ಠಿಯ ಅಧ್ಯಕ್ಷತೆ, 2004ರಲ್ಲಿ ಜಿಲ್ಲಾ ಮಟ್ಟದ ಚುಟುಕು ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು. 1998ರಲ್ಲಿ ಕಸಾಪದ ಮಕ್ಕಳ ಸಾಹಿತ್ಯ ಸಂಚಿಕೆಯ ಸಂಪಾದಕರಾಗಿದ್ದರು.

ಪ್ರಶಸ್ತಿಗಳ ಮಹಾಪೂರ :

ಮಕ್ಕಳ ಸಾಹಿತ್ಯ ಕ್ಷೇತ್ರದ ಸೇವೆಗಾಗಿ ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ(2012) ಸೇರಿದಂತೆ ಮದ್ರಾಸ್ ಸರ್ಕಾರದ ಮಕ್ಕಳ ಸಾಹಿತ್ಯ ಗೌರವ(1955), ಕಸಾಪದ ಜಿ.ಪಿ.ರಾಜರತ್ನಂ ದತ್ತಿ ಬಹುಮಾನ(1983), ಹೊಸದಿಲ್ಲಿಯ ಬಾಲ ಶಿಕ್ಷಕ ಪರಿಷತ್ ಪ್ರಶಸ್ತಿ (1987), ರಾಜ್ಯ ಸಾಹಿತ್ಯ ಅಕಾಡಮಿಯ ಮಕ್ಕಳ ಸಾಹಿತ್ಯ ಪುರಸ್ಕಾರ (1999), ಗಳು ಸಂದಿವೆ.

ಕೊ.ಅ.ಉಡುಪ ಪ್ರಶಸ್ತಿ, ಶಿವರಾಮ ಕಾರಂತ ಪ್ರತಿಷ್ಠಾನದ ಗೌರವ (2002), ದ.ಕ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ(2003), ಕರ್ನಾಟಕ ಸಂಘ ಶಿವಮೊಗ್ಗದ ಮಕ್ಕಳ ಸಾಹಿತ್ಯ ಪ್ರಶಸ್ತಿ (2004), ಆಳ್ವಾಸ್ ನುಡಿಸಿರಿ ಪ್ರಶಸ್ತಿ(2005), 75ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಅಮೃತ ಮಹೋತ್ಸವ ಸಮ್ಮೇಳನದಲ್ಲಿ ಸಮ್ಮಾನ(2009), ಕರ್ನಾಟಕ ಬಾಲ ವಿಕಾಸ ಅಕಾಡಮಿ ಗೌರವ ಪ್ರಶಸ್ತಿ (2010), ರಾಜ್ಯ ಮಟ್ಟದ ಬೆಳದಿಂಗಳ ಸಾಹಿತ್ಯ ಸಮ್ಮೇಳನದಲ್ಲಿ ‘ಕರ್ನಾಟಕ ಮಕ್ಕಳ ಸಾಹಿತ್ಯ ರತ್ನ’ ಗೌರವಗಳು ಪಳಕಳ‌ ಸೀತಾರಾಮ ಭಟ್ ರಿಗೆ ಸಂದಿವೆ.

ಯುಗಪುರುಷದಲ್ಲಿ ಪಳಕಳ ದಂಪತಿಗಳು ಸನ್ಮಾನಗೊಂಡ ಕ್ಷಣ

ಪಳಕಳ ಸೀತಾರಾಮ ಭಟ್ಟರು 1931 ಅಗಸ್ಟ 14 ರಂದು ದಕ್ಷಿಣ ಕನ್ನಡ ಜಿಲ್ಲೆಯ ಕಾರ್ಕಳ ತಾಲೂಕಿನ ಪುತ್ತಿಗೆ ಗ್ರಾಮದಲ್ಲಿ ಜನಿಸಿದರು. ಮೂಡುಬಿದಿರೆಯ ಜೈನ ಕಿರಿಯ ಮಹಾವಿದ್ಯಾಲಯದಲ್ಲಿ ಅಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ.

2 Shares

Facebook Comments

comments